ಬಾಗಲಕೋಟೆ: ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ ಪಡೆಯುವುದೇ ಸಾಹಸವಾಗಿದೆ. ಅದರಲ್ಲಿಯೂ ಸರ್ಕಾರಿ ಉದ್ಯೋಗ ಪಡೆಯುವುದಂತೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಕಷ್ಟಸಾಧ್ಯ. ಹೀಗಿರುವಾಗ ಜಮಖಂಡಿ ತಾಲೂಕಿನ ಜಂಬಗಿ ಗ್ರಾಮದ ಮಹಾಂತೇಶ ರಾಮಪ್ಪ ಬಾಡಗಿ ಅವರು ಬರೋಬ್ಬರಿ 14 ಸರ್ಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಸ್ನಾತಕೋತ್ತರ ಪದವೀಧರರಾಗಿರುವ ಮಹಾಂತೇಶ ಬಿಎಡ್ ಮಾಡಿದ್ದು, ತುಮಕೂರು ಜಿಲ್ಲೆ ಗುಬ್ಬಿ ಮೊರಾರ್ಜಿ ವಸತಿ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. 2016 ರಿಂದ 2021 ರ ವರೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರು ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿದ್ದಾರೆ.
ಎಫ್ಡಿಎ, ಎಸ್ಡಿಎ, ವಾರ್ಡನ್, ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಪಿಯು ಕಾಲೇಜು, ಗ್ರಾಪಂ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಲಯದ ಮೇಲ್ವಿಚಾರಕ ಸೇರಿದಂತೆ 14 ಸರ್ಕಾರಿ ಹುದ್ದೆಗಳಿಗೆ ನೇಮಕ ಆಗುವ ಅವಕಾಶ ಬಂದಿದೆ. ಆದರೆ, ಆಡಳಿತಾತ್ಮಕ ಪರೀಕ್ಷೆ ಬರೆಯುವ ಉದ್ದೇಶ ಹೊಂದಿರುವ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.