ಕಳೆದ ಶೈಕ್ಷಣಿಕ ಸಾಲಿನಲ್ಲಿ ಸರಿಯಾಗಿ ಶಾಲೆಗಳು ನಡೆಯದೆ ಖಾಸಗಿ ಶಾಲೆ ಶಿಕ್ಷಕರಿಗೆ ತೊಂದರೆಯಾಗಿದೆ. ಕೆಲವು ಶಾಲೆಗಳಲ್ಲಿ ಸರಿಯಾಗಿ ವೇತನ ನೀಡಿಲ್ಲ. ವರ್ಕ್ಲೋಡ್ ಇಲ್ಲದ ಕಾರಣ ಕೆಲವು ಶಿಕ್ಷಕರನ್ನು ಕೈಬಿಡಲಾಗಿದೆ.
ಆನ್ಲೈನ್ ಕ್ಲಾಸ್ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆದಿದ್ದರೂ ಬಹುತೇಕ ಶಿಕ್ಷಕರಿಗೆ ಕೆಲಸವಿಲ್ಲದಂತಾಗಿದೆ. ಶಾಲೆಗಳು ಸರಿಯಾಗಿ ನಡೆಯದೆ ಶುಲ್ಕ ಪಾವತಿಯಾಗದ ಮೊದಲೇ ಸಂಕಷ್ಟದಲ್ಲಿರುವ ಕೆಲವು ಶಾಲೆ ಆಡಳಿತ ಮಂಡಳಿಗಳು ವರ್ಕ್ಲೋಡ್ ಇಲ್ಲದ ಕಾರಣಕ್ಕೆ ಕೆಲವು ಶಿಕ್ಷಕರನ್ನು ಕೈಬಿಡುತ್ತಿದ್ದಾರೆ. ಇನ್ನು 1 ರಿಂದ 9ನೇ ತರಗತಿವರೆಗೆ ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡಲಾಗಿದೆ.
ಪರೀಕ್ಷೆ, ಮೌಲ್ಯಮಾಪನ, ಪ್ರವೇಶ, ದಾಖಲಾತಿ, ಪಾಠ, ಕ್ರೀಡೆ ಮೊದಲಾದ ಚಟುವಟಿಕೆಗಳು ನಡೆದಿದ್ದರೆ ಶಿಕ್ಷಕರಿಗೆ ಅನುಕೂಲವಾಗುತ್ತಿತ್ತು. ಆದರೆ, ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸರಿಯಾಗಿ ನಡೆಯದ ಕಾರಣ ಕೆಲವು ಶಿಕ್ಷಕರ ಕೆಲಸಕ್ಕೆ ಕುತ್ತು ಬಂದಿದೆ. ಅನೇಕರನ್ನು ಕೆಲಸದಿಂದ ಕೈಬಿಡಲಾಗಿದೆ ಎನ್ನಲಾಗಿದೆ.
ಕೆಲಸವಿಲ್ಲದಂತಾದ ಬಹುತೇಕ ಶಿಕ್ಷಕರು, ಅತಿಥಿ ಉಪನ್ಯಾಸಕರು ಬೇರೆ ಕೆಲಸ ಮಾಡತೊಡಗಿದ್ದಾರೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ತರಕಾರಿ ಮಾರಾಟ ಸೇರಿದಂತೆ ಅನೇಕ ಕೆಲಸ ಮಾಡುತ್ತಿದ್ದಾರೆ. ಕೊರೊನಾ ದೂರವಾಗಿ ಶಾಲೆಗಳು ಆರಂಭವಾದರೆ ಶಿಕ್ಷಕರಿಗೆ ಅನುಕೂಲವಾಗುತ್ತಿತ್ತು. ಆದರೆ, ಇನ್ನೇನು ಸರಿಯಾಯ್ತು ಎನ್ನುವಾಗಲೇ ಎರಡನೇ ಅಲೆ ಆತಂಕ ಮೂಡಿಸಿದೆ. ಇದರಿಂದಾಗಿ ಅನೇಕ ಶಿಕ್ಷಕರಿಗೆ ತೊಂದರೆಯಾಗಿದೆ. ಮೊದಲೇ ಸಂಕಷ್ಟದಲ್ಲಿರುವ ಅನೇಕ ಶಾಲೆಗಳು ಶಿಕ್ಷಕರನ್ನು ಕೆಲಸದಿಂದ ಕೈಬಿಟ್ಟಿವೆ ಎನ್ನಲಾಗಿದೆ.