ಭೋಪಾಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆಗೆ ಕಾರಣವಾದ ಆರೋಪದ ಮೇಲೆ ಶಿಕ್ಷಕನೊಬ್ಬನನ್ನು ಬಿಹಾರದ ಕೈಮೂರ್‌ನಲ್ಲಿ ಬಂಧಿಸಲಾಗಿದೆ. ನಿತೀಶ್ ಕುಮಾರ್ ದುಬೆ ಎಂಬ ಶಿಕ್ಷಕ ಸಾಧುವಿನ ವೇಷ ಧರಿಸಿ ಪರಾರಿಯಾಗಿದ್ದ.
ಜನವರಿ 25 ರಂದು ಆರೋಪಿ, ಭೋಪಾಲ್‌ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದ್ದು, ಜನವರಿ 26 ರಂದು ಆಕೆ ಸಾವಿನ ಸುದ್ದಿ ತಿಳಿದ ನಂತರ ಬಿಹಾರಕ್ಕೆ ಪರಾರಿಯಾಗಿದ್ದ. ಕೈಮೂರ್‌ನ ಅಲಿಪುರದ ನಿವಾಸಿಯಾದ ದುಬೆ ತನ್ನ ಮೊಬೈಲ್ ಫೋನ್ ಅನ್ನು ಸಹ ಸ್ವಿಚ್ ಆಫ್ ಮಾಡಿದ್ದ.
ಮರುದಿನ ಆತ ತನ್ನ ಕುಟುಂಬದೊಂದಿಗೆ ಮಹಾ ಕುಂಭಕ್ಕೆ ತೆರಳಿದ್ದು, ಅಲ್ಲಿ ತನ್ನ ಫೋನ್ ಅನ್ನು ಆನ್ ಮಾಡಿದ ತಕ್ಷಣ, ಲೋಕೇಷನ್ ಆಧರಿಸಿ ಪೊಲೀಸರು ಅವನ ಸ್ಥಳವನ್ನು ಪತ್ತೆ ಮಾಡಿದ್ದರು.
ಎಸ್‌ಪಿ ಪ್ರಮೋದ್ ಕುಮಾರ್ ಸಿನ್ಹಾ ಆರೋಪಿಯನ್ನು ಬಂಧಿಸಲು ತಂಡವನ್ನು ರಚಿಸಿದ್ದು, ಅವನ ಬಂಧನಕ್ಕೆ 10,000 ರೂ. ಬಹುಮಾನವನ್ನು ಘೋಷಿಸಿದ್ದರು. ಪೊಲೀಸರು ಅವನ ಗ್ರಾಮಕ್ಕೆ ಹೋದಾಗ ಮಹಾ ಕುಂಭ ಮೇಳಕ್ಕೆ ಹೋಗಿರುವುದು ತಿಳಿದುಬಂದಿತ್ತು.
ಲೋಕೇಷನ್ ಟ್ರ್ಯಾಕ್ ಮಾಡಿದ್ದ ಪೊಲೀಸರು ಕುಂಭಮೇಳದಲ್ಲಿ ಅವನನ್ನು ಬಂಧಿಸಲು ಪ್ರಯತ್ನಿಸಿದರಾದರೂ ದೊಡ್ಡ ಜನಸಂದಣಿಯಿಂದಾಗಿ ಯಶಸ್ವಿಯಾಗಿರಲಿಲ್ಲ. ಮಾಘ ಪೂರ್ಣಿಮೆಯಂದು ಸ್ನಾನ ಮಾಡಿದ ನಂತರ, ಆರೋಪಿ ಕುಂಭಮೇಳ ಪ್ರದೇಶದಿಂದ ಮನೆಗೆ ತೆರಳಿದ್ದು, ಈ ಮಾಹಿತಿ ಪಡೆದ ಪೊಲೀಸರು ಅವನನ್ನು ಹಿಂಬಾಲಿಸಿ ಬಂಧಿಸಿದ್ದಾರೆ.
ಸುಖಿ ಸೆವಾನಿಯಾ ಗ್ರಾಮದ ಖಾಸಗಿ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಜನವರಿ 25 ರಂದು, ಶಾಲಾ ರಜೆಯ ಸಮಯದಲ್ಲಿ, ನಿತೀಶ್ ದುಬೆ 11 ನೇ ತರಗತಿಯ ವಿದ್ಯಾರ್ಥಿನಿಗೆ ತರಗತಿಯಲ್ಲಿ ಕಿರುಕುಳ ನೀಡಿದ್ದ. ಈ ಘಟನೆಯಿಂದ ತೀವ್ರವಾಗಿ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ವಿದ್ಯಾರ್ಥಿನಿ ಕಿರುಕುಳದ ಬಗ್ಗೆ ತನ್ನ ತಂದೆಗೆ ತಿಳಿಸಿದ್ದು, ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ವರದಿಯಾಗಿದೆ. ಸಂತ್ರಸ್ತೆಯ ತಂದೆ ನ್ಯಾಯಕ್ಕಾಗಿ ಕಲೆಕ್ಟರೇಟ್ ಕಚೇರಿಗೆ ಹೋದಾಗ ವಿಷಯ ಬೆಳಕಿಗೆ ಬಂದಿದ್ದು, ಜನವರಿ 31 ರಂದು ಪ್ರಕರಣ ದಾಖಲಿಸಲಾಗಿತ್ತು.