ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿ ಸುಳ್ಳು ದೂರು ದಾಖಲಿಸಿದ್ದ ಶಿಕ್ಷಕನಿಂದ 1.5 ಲಕ್ಷ ರೂ. ವಸೂಲಿ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ಬಾಗಲಕೋಟೆ ಜಿಲ್ಲೆ ಮರಡಿ ಮಲ್ಲೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಲಿಂಗಪ್ಪ ಬಿ. ಕೆರಕಲಮಟ್ಟಿ ಅವರ ವಿರುದ್ಧದ ಪ್ರಕರಣಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ರದ್ದು ಮಾಡಿದೆ.
ಅರ್ಜಿದಾರ ಶಿವಲಿಂಗಪ್ಪ ವಿರುದ್ಧ ಶಿಕ್ಷಕ ಚಂದ್ರು ರಾಥೋಡ್ ಕ್ರಿಮಿನಲ್ ದೂರು ದಾಖಲಿಸಿರುವುದು, ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಆರ್ಥಿಕ ನೆರವು ಪಡೆದುಕೊಂಡಿರುವುದು ಸಾಬೀತಾಗಿದೆ. ಆದರೆ, ಚಂದ್ರು ರಾಥೋಡ್ ಮಾಡಿರುವ ಆರೋಪಗಳು ಸುಳ್ಳು ಮತ್ತು ದುರುದ್ದೇಶದಿಂದ ಕೂಡಿವೆ. ದೂರು ನಕಲಿಯಾಗಿದೆ ಎನ್ನುವುದು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ತೆರಿಗೆ ಹಣದಿಂದ ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದುಕೊಂಡ 1.5 ಲಕ್ಷ ರೂ. ವಾಪಸ್ ಪಡೆಯುವಂತೆ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಆದೇಶಿಸಿದೆ.
1988ರ ಡಿಸೆಂಬರ್ 12ರಂದು ಚಂದ್ರು ಶಿಕ್ಷಕರಾಗಿ ಸೇವೆಗೆ ಸೇರಿದ್ದು, ದುರ್ನಡತೆ ಕಾರಣಕ್ಕೆ 2012 ರಲ್ಲಿ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಈ ಬಗ್ಗೆ ಚಂದ್ರು ನ್ಯಾಯಾಂಗ ಹೋರಾಟ ನಡೆಸಿ ಯಶಸ್ವಿಯಾಗಿದ್ದು, ಅವರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಬೇಕು. ಹಿಂಬಾಕಿ ನೀಡಬೇಕು ಎಂದು 2020 ರಲ್ಲಿ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ.
ಈ ನಡುವೆ ಮುಖ್ಯ ಶಿಕ್ಷಕ ಶಿವಲಿಂಗಪ್ಪ ತಮ್ಮನ್ನು ಪುನಃ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲು 10.50 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವುದಾಗಿ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಚಂದ್ರು ಮೂರು ದೂರು ದಾಖಲಿಸಿದ್ದರು. ಪ್ರಕರಣಗಳನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದ್ದು, ಶಿಕ್ಷಕನಿಂದ 1.5 ಲಕ್ಷ ರೂ. ವಾಪಸ್ ಪಡೆಯಲು ಆದೇಶಿಸಿದೆ.