ಬೆಂಗಳೂರು: ಆರರಿಂದ ಎಂಟನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ನಿರ್ದೇಶನದ ಅನ್ವಯ ಇನ್ನೊಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಶಿಕ್ಷಣ ಇಲಾಖೆ ಪ್ರಕಟಿಸಿದ್ದ 1:1 ಅನುಪಾತದ ದಾತ್ಕಲಿಕ ಆಯ್ಕೆ ಪಟ್ಟಿ ಪ್ರಶ್ನಿಸಿ ಮಹಿಳಾ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದು, ಅವರ ವಾದ ಪರಿಗಣಿಸಿ ಹೊಸ ಪಟ್ಟಿ ಪ್ರಕಟಿಸಲು ಹೈಕೋರ್ಟ್ ಸೂಚನೆ ನೀಡಿದ್ದು, ಪರಿಷ್ಕೃತ ಪಟ್ಟಿಯಲ್ಲಿ ಹೆಚ್ಚು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಸಿಗಲಿದೆ. ಪ್ರಸ್ತುತ ಇರುವ ಪಟ್ಟಿಯಿಂದ 300ಕ್ಕೂ ಅಧಿಕ ಮಂದಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
15 ಸಾವಿರ ಶಿಕ್ಷಕರ ಹುದ್ದೆಗಳಲ್ಲಿ 13,363 ಹುದ್ದೆಗಳು ಭರ್ತಿಯಾಗಿದ್ದು, 1,637 ಹುದ್ದೆಗಳಿಗೆ ಭರ್ತಿ ಮಾಡಿಲ್ಲ. ಹೊಸ ಪಟ್ಟಿಯಲ್ಲಿ ಅರ್ಹತೆ ಹೊಂದಿದ ಹೆಚ್ಚಿನ ಅಭ್ಯರ್ಥಿಗಳು ದೊರೆಯಬಹುದು. ಮೆರಿಟ್ ಆಧಾರದಲ್ಲಿ ಹೊಸಪಟ್ಟಿ ಸಿದ್ಧಪಡಿಸಿ ವಿವಾಹಿತ, ಅವಿವಾಹಿತ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.
ವಿವಾಹಿತ ಮಹಿಳೆಯರು ಸಲ್ಲಿಸಿರುವ ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪರಿಗಣಿಸಿ ನೇಮಕ ಪ್ರಕ್ರಿಯೆ ಮುಂದುವರೆಸಲು ಹೈಕೋರ್ಟ್ ಆದೇಶ ನೀಡಿದ್ದು, ಅದರಂತೆ ಪಟ್ಟಿ ಪರಿಷ್ಕರಿಸಿ ಸಿದ್ದಪಡಿಸಿ ವಾರದೊಳಗೆ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.