ಬೆಂಗಳೂರು: ಹೈಕೋರ್ಟ್ ಆದೇಶದ ಅನ್ವಯ ಸರ್ಕಾರಿ ಶಾಲೆಗಳ ಆರರಿಂದ ಎಂಟನೇ ತರಗತಿವರೆಗಿನ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಶಿಕ್ಷಣ ಇಲಾಖೆ ಪುನರಾರಂಭಿಸಿದೆ.
ಕಳೆದ ಮಾರ್ಚ್ ನಲ್ಲಿ 1:1 ಅನುಪಾತದ ಮುಖ್ಯ ಆಯ್ಕೆ ಪಟ್ಟಿಯಲ್ಲಿ ಕೌನ್ಸೆಲಿಂಗ್ ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಅಕ್ಟೋಬರ್ 19ರಂದು(ಇಂದು) ಪ್ರಕಟಿಸಲಾಗುವುದು. ಶಿಕ್ಷಣ ಇಲಾಖೆಯ https://school education.karnataka.gov.in ವೆಬ್ಸೈಟ್ನಲ್ಲಿ ಅರ್ಹರ ಪಟ್ಟಿ ಪ್ರಕಟಿಸಲಾಗುವುದು. ಅಕ್ಟೋಬರ್ 23 ರಂದು ಬೆಳಿಗ್ಗೆ 10.30 ರಿಂದ ಬೆಂಗಳೂರಿನ ಶಿಕ್ಷಣ ಸದನದಲ್ಲಿ ಸ್ಥಳ ನಿಯೋಜನೆಗೆ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಲಿದ್ದು, ದಾಖಲಾತಿಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ.
ಕರ್ನಾಟಕ ಸಿಇಟಿ ಪರೀಕ್ಷೆ ಮೂಲಕ 15,000 ಪದವೀಧರ ಶಿಕ್ಷಕರ ಹುದ್ದೆಗಳಿಗೆ ಆಯ್ಕೆ ಪಟ್ಟಿ ಪ್ರಕಟಿಸಿ ಆರು ತಿಂಗಳಾದರೂ ಕೆಲವು ಜಿಲ್ಲೆಗಳ ಅಭ್ಯರ್ಥಿಗಳ ಕಾನೂನು ಹೋರಾಟದ ಕಾರಣ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿತ್ತು. ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳು, ಬಿಬಿಎಂಪಿ ವ್ಯಾಪ್ತಿಯ ಶೇಕಡ 8ರಷ್ಟು ಹುದ್ದೆಗಳಿಗೆ ಸಂಬಂಧಿಸಿದ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಜಿಲ್ಲೆಗಳ ಪ್ರಕರಣ ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರೆಯಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡಲ್ಲಿ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆಯಾದ 13,500ಕ್ಕೂ ಅಧಿಕ ಶಿಕ್ಷಕರು ಈ ಶೈಕ್ಷಣಿಕ ವರ್ಷದಲ್ಲಿಯೇ ಶಾಲೆಗಳಲ್ಲಿ ಪಾಠ ಮಾಡಲಿದ್ದಾರೆ.