ಬೆಂಗಳೂರು: ನಾಲ್ಕನೇ ತರಗತಿ ವಿದ್ಯಾರ್ಥಿಗೆ ಹೊಡೆದ ಶಿಕ್ಷಕಿಯ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನಸಂದ್ರ ಎಕೆಜಿ ಕಾಲೋನಿಯಲ್ಲಿ ಪೋಷಕರೊಂದಿಗೆ 9 ವರ್ಷದ ಬಾಲಕ ವಾಸವಾಗಿದ್ದಾನೆ. ಮನೆಯ ಸಮೀಪದ ಖಾಸಗಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಬಾಲಕ ಜೂನ್ 21ರಂದು ಎಂದಿನಂತೆ ಶಾಲೆಗೆ ಹೋಗಿದ್ದಾನೆ. ಅಂದು ಬೆಳಿಗ್ಗೆ ತರಗತಿಗೆ ಬಂದ ಶಿಕ್ಷಕಿ ವಿದ್ಯಾರ್ಥಿಗಳ ಡೈರಿ ನೋಡಿದ್ದಾರೆ. ಈ ಸಂತ್ರಸ್ತ ವಿದ್ಯಾರ್ಥಿ ಡೈರಿ ನೋಡಿದ ಅವರು ಕೆನ್ನೆ ಮತ್ತು ಕಿವಿ ಮೇಲೆ ಹೊಡೆದಿದ್ದಾರೆ. ವಿದ್ಯಾರ್ಥಿ ತಂದೆ, ತಾಯಿಗೆ ವಿಷಯ ತಿಳಿಸಿದ್ದು, ಪೋಷಕರು ಶಾಲೆಗೆ ಬಂದು ಪ್ರಶ್ನಿಸಿದಾಗ ಶಿಕ್ಷಕಿ ಸರಿಯಾಗಿ ಉತ್ತರ ನೀಡದೇ ನಿರ್ಲಕ್ಷ್ಯತೋರಿದ್ದಾರೆ. ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಲಾಗಿದ್ದು, ಕೂಡಲೇ ಹೊಯ್ಸಳ ಸಿಬ್ಬಂದಿ ಶಾಲೆಗೆ ಆಗಮಿಸಿ ಕೊಠಡಿಯಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಅರ್ಧ ಗಂಟೆಯಲ್ಲಿ ಸಂತ್ರಸ್ತ ವಿದ್ಯಾರ್ಥಿಗೆ ಶಿಕ್ಷಕಿ 23 ಬಾರಿ ಹೊಡೆದಿರುವುದು ಕಂಡುಬಂದಿದ್ದು, ಶಿಕ್ಷಕಿಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.