ದೇಶದ ಬಹುತೇಕ ಕಡೆ ಮಳೆಯಿಂದಾಗಿ ಪ್ರವಾಹ ಕಾಣಿಸಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಲಕ್ನೋದ ಶಾಲೆಯೊಂದರ ಆವರಣದಲ್ಲೂ ನೀರು ತುಂಬಿದ್ದು, ಆ ಶಾಲೆಯ ಶಿಕ್ಷಕಿ ಮಕ್ಕಳು ಜೋಡಿಸಿದ ಕುರ್ಚಿ ಸಾಲನ್ನು ಬಳಸಿಕೊಂಡು ತರಗತಿ ಪ್ರವೇಶಿಸಿದ್ದಾರೆ.
ಮಥುರಾ ಜಿಲ್ಲೆಯಲ್ಲಿ ಬುಧವಾರ ಎಡೆಬಿಡದೆ ಸುರಿದ ಮಳೆಯಿಂದಾಗಿ ಶಾಲೆಯೊಂದರ ಆವರಣ ಜಲಾವೃತಗೊಂಡಿತ್ತು. ಈ ವಿಚಿತ್ರದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತನ್ನ ಕಾಲು ಒದ್ದೆ ಆಗಬಾರದೆಂದು ಮಕ್ಕಳನ್ನು ಪ್ಲಾಸ್ಟಿಕ್ ಕುರ್ಚಿ ಇಡಲು ಬಳಸಿಕೊಂಡಿದ್ದಕ್ಕೆ ಆ ಶಿಕ್ಷಕಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವಿಡಿಯೊದಲ್ಲಿ, ಮಕ್ಕಳು ತಮ್ಮ ಶಿಕ್ಷಕರಿಗೆ ನಡೆಯಲು ಅನುಕೂಲವಾಗಲಿ ಎಂದು ತಾವು ನೀರಲ್ಲಿ ನಿಂತು ಸಾಲಾಗಿ ಪ್ಲಾಸ್ಟಿಕ್ ಕುರ್ಚಿಗಳನ್ನು ಇರಿಸಲು ಸೂಚಿಸುವುದು ಮತ್ತು ಆಕೆ ಒಂದು ಖುರ್ಚಿಯಿಂದ ಇನ್ನೊಂದು ಖುರ್ಚಿಗೆ ದಾಟಿ ಬರುವುದನ್ನು ಕಾಣಬಹುದು.
ಇದು ಸಂಗೀತ ಕುರ್ಚಿಗಳಲ್ಲ, ವಿದ್ಯಾರ್ಥಿಗಳು ಶಿಕ್ಷಕರಿಗೆ ಮಳೆ ತುಂಬಿದ ಹಾದಿಯನ್ನು ದಾಟಲು ಸಹಾಯ ಮಾಡುತ್ತಾರೆ ಎಂದು ಪಾಯಲ್ ಮೊಹಿಂದ್ರ ಎಂಬುವರು ವಿಡಿಯೋವನ್ನು ಪಂಚಿಂಗ್ ಶೀರ್ಷಿಕೆಯೊಂದಿಗೆ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.