
ಚಿತ್ರದುರ್ಗ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಪತಿ ಹಾಗೂ ಮನೆಯವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಹೊಸದುರ್ಗದ ಗೊರವನಕಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೀತಶ್ರೀ ಮೃತ ಮಹಿಳೆ. ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಗೀತಶ್ರೀಗೆ ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ತುಮಕೂರು ಮೂಲದ ಗೀತಶ್ರೀ ಗೊರವನಕಲ್ಲು ಗ್ರಾಮದ ಪ್ರಭಾಕರ್ ಎಂಬಾತನನ್ನು ಆರು ವರ್ಷಗಳ ಹಿಂದೆ ವಿವಾಹವಾಗಿದ್ದಳು. ದಂಪತಿಗೆ ಓರ್ವ ಮಗಳು ಇದ್ದಳು. ಪ್ರಭಾಕರ್ ಖಾಸಗಿ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದರೆ, ಗೀತಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಇತ್ತೀಚೆಗೆ ಪ್ರಭಾಕರ್ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ. ಇದೇ ವಿಚಾರವಾಗಿ ಜಗಳವಾಡುತ್ತಿದ್ದ. ಮನನೊಂದಿದ್ದ ಗೀತಶ್ರೀ ಕೆಲ ದಿನಗಳ ಕಾಲ ತವರಿಗೆ ಹೋಗಿದ್ದಳು. ಮೂರ್ನಾಲ್ಕು ದಿನಗಳ ಹಿಂದಷ್ಟೇ ಪತಿ ಮನೆಗೆ ವಾಪಾಸ್ ಆಗಿದ್ದಳು.
ಆದರೆ ಈಗ ನೇಣು ಬಿಗಿದ ಸ್ಥಿತಿಯಲ್ಲಿ ಗೀತಶ್ರೀ ಶವ ಪತ್ತೆಯಾಗಿದೆ. ಗೀತಶ್ರೀ ಪೋಷಕರು ಪತಿ ಹಾಗೂ ಮನೆಯವರು ಹತ್ಯೆ ಮಾಡಿ ಬಳಿಕ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪತಿ ಪ್ರಭಾಕರ ನಾಪತ್ತೆಯಾಗಿದ್ದಾನೆ.
ಹೊಸದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.