ಅಸ್ಸಾಂ: ಅಸ್ಸಾಂನ ಮಜುಲಿ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಶಿಸ್ತು ಕಲಿಸಲು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿರುವ ಘಟನೆ ನಡೆದಿದೆ. ಘಟನೆಯ ಕುರಿತು ಜಿಲ್ಲೆಯ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
ಶಾಲೆಯ ಮಾರ್ಗಸೂಚಿಗಳ ಪ್ರಕಾರ ಮಕ್ಕಳು ಉದ್ದ ಕೂದಲನ್ನು ಇಟ್ಟುಕೊಳ್ಳುತ್ತಿದ್ದಾರೆ ಎಂದು ಶಾಲೆಯ ಅಧಿಕಾರಿಗಳು ಉನ್ನತ ಅಧಿಕಾರಿಗಳಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಯಿತು. ಈ ಬಗ್ಗೆ ಮಕ್ಕಳ ಪೋಷಕರಿಗೆ ತಿಳಿಸಲಾಯಿತು. ಆದರೆ ಏನೂ ಬದಲಾವಣೆ ಆಗಿಲ್ಲ. ಇದು ಕೇವಲ ಶಿಸ್ತು ಕಲಿಸುವ ವಿಧಾನವಾಗಿತ್ತು ಎಂದು ಶಾಲೆಯ ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಕೂಡಲೇ ವರದಿ ನೀಡುವಂತೆ ಜಿಲ್ಲಾಧಿಕಾರಿ ಕಾವೇರಿ ಬಿ ಶರ್ಮಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಶಿಕ್ಷಕರು ಉದ್ದನೆಯ ಕೂದಲನ್ನು ಕತ್ತರಿಸಿದ್ದಾರೆ. ಕೆಲವು ವರದಿಗಳು ಹೇಳುವಂತೆ ಪೂರ್ತಿ ಕತ್ತರಿಸಲಾಗಿಲ್ಲ ಎನ್ನಲಾಗಿದೆ.
ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಶಿಕ್ಷಕರು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಲು ಯಾವುದೇ ಅವಕಾಶವಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಅಪ್ರಾಪ್ತ ಮಕ್ಕಳೊಂದಿಗೆ ವ್ಯವಹರಿಸಲು ಇತರ ಮಾರ್ಗಗಳಿವೆ. ಆ ದಿನ ನಿಜವಾಗಿ ಏನಾಯಿತು ಎಂಬುದನ್ನು ಅರಿಯಲು ನಾವು ತನಿಖೆ ಮಾಡುತ್ತಿದ್ದೇವೆ ಅಧಿಕಾರಿ ಹೇಳಿದರು.