ರಾಂಚಿ: ಜಾರ್ಖಂಡ್ ನ ಗುಮ್ಲಾದಲ್ಲಿ ಶಾಲೆಯ ರೂಂ ಲಾಕ್ ಮಾಡಿಕೊಂಡ ಶಿಕ್ಷಕ ತರಗತಿಯೊಳಗೆ 6 ನೇ ತರಗತಿಯ ವಿದ್ಯಾರ್ಥಿಗಳನ್ನು ಮರದ ಬೆತ್ತದಿಂದ ಅಮಾನುಷವಾಗಿ ಥಳಿಸಿದ್ದಾನೆ.
ಗಾಯಗೊಂಡ 13 ವಿದ್ಯಾರ್ಥಿಗಳನ್ನು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಗುಮ್ಲಾದಲ್ಲಿರುವ ಸೇಂಟ್ ಮೈಕೆಲ್ಸ್ ನ ವಿಕಾಸ್ ಸಿರಿಲ್ ಎಂದು ಗುರುತಿಸಲಾದ ಶಿಕ್ಷಕ 6 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಆದೇಶದ ಮೇರೆಗೆ ನೃತ್ಯ ಮಾಡಲು ನಿರಾಕರಿಸಿದಾಗ ಕೋಪಗೊಂಡು ಇಂತಹ ಕೃತ್ಯವೆಸಗಿದ್ದಾನೆ. ವಿದ್ಯಾರ್ಥಿಗಳು ಪ್ರಾಂಶುಪಾಲರಿಗೂ ತಿಳಿಸಿದರೂ ಪ್ರಯೋಜನವಾಗಿಲ್ಲ. ಬದಲಿಗೆ, ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಥಳಿಸಲು ಶಿಕ್ಷಕರಿಗೆ ಆದೇಶಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಪೋಷಕರು ಶಾಲೆಯ ಎದುರು ಬೀದಿಗಿಳಿದು ಪ್ರತಿಭಟನೆ ನಡೆಸಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ ಅಶುತೋಷ್ ಸಿಂಗ್ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪೋಷಕರ ದೂರಿನ ಆಧಾರದ ಮೇಲೆ, ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಶಿಶಿರ್ ಕುಮಾರ್ ಸಿಂಗ್ ಅವರು ತನಿಖೆಗೆ ತಂಡವನ್ನು ರಚಿಸಿದ್ದಾರೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೋಷಕರಿಗೆ ಭರವಸೆ ನೀಡಿದ್ದಾರೆ.