ಗದಗ: ವಿದ್ಯಾರ್ಥಿಗಳ ತಲೆ ಕೂದಲು ಕಟ್ ಮಾಡಿದ್ದ ಶಿಕ್ಷಕನಿಗೆ ಧರ್ಮದೇಟು ನೀಡಿದ ಘಟನೆ ಗದಗ -ಬೆಟಗೇರಿ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕಂಪ್ಯೂಟರ್ ಶಿಕ್ಷಕ ಬಿನೋಯ್ ವಿದ್ಯಾರ್ಥಿಗಳ ತಲೆ ಕೂದಲು ಕತ್ತರಿಸಿ ಉದ್ಧಟತನ ತೋರಿದ್ದಾನೆ. ಆತ ಕೂದಲು ಕತ್ತರಿಸುವಾಗ 7ನೇ ತರಗತಿಯ ವಿದ್ಯಾರ್ಥಿ ಹಣೆಗೆ ಕತ್ತರಿ ತಾಗಿ ಗಾಯವಾಗಿದೆ. ಕೂದಲು ಕತ್ತರಿಸಬೇಡಿ ಎಂದು ಬಾಲಕ ಗೋಗರೆದು ಒದ್ದಾಡಿದರೂ ಬಿಡದೆ ಕೂದಲು ಕತ್ತರಿಸಿದ್ದಾನೆ.
ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು ಶಾಲೆಗೆ ಬಂದು ಪ್ರಶ್ನಿಸಿದ್ದಾರೆ. ಶಿಕ್ಷಕ ಬಿನೋಯ್ ನಮ್ಮ ಶಾಲೆಯಲ್ಲಿ ಈ ರೀತಿ ರೂಲ್ಸ್ ಇದೆ ಎಂದು ವಾದ ಮಾಡಿದ್ದಾನೆ. ನೀನೇ ಸರಿಯಾಗಿ ಕಟಿಂಗ್ ಮಾಡಿಸಿಲ್ಲ ಎಂದು ಪೋಷಕರು ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ. ಮಕ್ಕಳು ಕಟಿಂಗ್ ಮಾಡಿಸಿಕೊಳ್ಳದಿದ್ದರೆ ಪೋಷಕರಿಗೆ ಹೇಳಬೇಕಿತ್ತು, ಇವರೇ ಕಟಿಂಗ್ ಮಾಡಿದರೆ ಹೇಗೆ ಎಂದು ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಪೋಷಕರು ಶಿಕ್ಷಕನನ್ನು ಥಳಿಸಿದ್ದಾರೆ. ಆತನನ್ನು ಶಾಲೆಯಿಂದ ತೆಗೆದುಹಾಕುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಬಿಇಒ ಆರ್.ಎಸ್. ಬುರಡಿ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಪೊಲೀಸರು ಶಾಲೆಗೆ ಆಗಮಿಸಿ ಕೂದಲು ಕಟ್ ಮಾಡಿದ ಶಿಕ್ಷಕ ಬಿನೋಯ್ ನನ್ನು ವಶಕ್ಕೆ ಪಡೆದಿದ್ದಾರೆ.