ಬೆಂಗಳೂರು: 7ನೇ ವೇತನ ಆಯೋಗದಲ್ಲಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡಬೇಕು. 30 ದಿನ ಗಳಿಕೆ ರಜೆ ನೀಡಬೇಕು ಎಂದು ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಈ ಕುರಿತಾಗಿ ಸಂಘದ ಅಧ್ಯಕ್ಷ ಕೆ. ಕೃಷ್ಣಪ್ಪ ಪತ್ರ ಬರೆದಿದ್ದಾರೆ. ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವೇತನ ಶ್ರೇಣಿ ಪಡೆದುಕೊಂಡು ಪ್ರಾಥಮಿಕ ಶಾಲಾ ಬಡ್ತಿ ಮುಖ್ಯ ಶಿಕ್ಷಕರ ಹುದ್ದೆಯನ್ನು ನಿರ್ವಹಿಸುತ್ತಿರುವವರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡಬೇಕು. ಒಂದೇ ಹುದ್ದೆಯಲ್ಲಿ 20 ರಿಂದ 30 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ವಿಶೇಷ ಭತ್ಯೆ ನೀಡುತ್ತಿರುವುದು ಸಂರೋಷದ ವಿಷಯ. ಆದರೆ, ಬಡ್ತಿ ಪಡೆದ ನಂತರ ಮುಖ್ಯ ಶಿಕ್ಷಕರು ಈ ಅವಕಾಶದಿಂದ ವಂಚಿತರಾಗುತ್ತಿದ್ದು, ಅವರಿಗೂ ಸೌಲಭ್ಯ ನೀಡಬೇಕು ಎಂದು ಹೇಳಲಾಗಿದೆ.
ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ನೀಡುತ್ತಿರುವ 30 ದಿನ ಗಳಿಕೆ ರಜೆಯನ್ನು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಿಗೂ ನೀಡಬೇಕು. ಶಾಲಾ ಶಿಕ್ಷಣ ಸಂಯೋಜಕರ ಹುದ್ದೆಗೆ ಸೇವಾ ಹಿರಿತನ ಪರಿಕಣಿಸಿ ಪರೀಕ್ಷೆ ಇಲ್ಲದೆ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲಾಗಿದೆ.