ಮುಂಬೈ: ಮಹಾರಾಷ್ಟ್ರದಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕನನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಬೀಡ್ ನಗರದಲ್ಲಿ ಟ್ಯೂಷನ್ ಗೆ ಬರುತ್ತಿದ್ದ 11 ವರ್ಷದ ಬಾಲಕಿ ಮೇಲೆ 30 ವರ್ಷದ ಅರೇಬಿಕ್ ಶಿಕ್ಷಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ಆರೋಪಿಯು ತನ್ನ ಮನೆಯಲ್ಲಿ ಮಕ್ಕಳಿಗೆ ಉರ್ದು ಮತ್ತು ಅರೇಬಿಕ್ ಕಲಿಸುತ್ತಿದ್ದ ಎಂದು ಪೇಠಬೀಡು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎ.ಕೆ. ಮುದ್ಲಿಯಾರ್ ತಿಳಿಸಿದ್ದಾರೆ.
ಇತರ ವಿದ್ಯಾರ್ಥಿಗಳು ಹೋದ ನಂತರ ಬಾಲಕಿ ಮೇಲೆ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ. ಬಾಲಕಿ ಹೊಟ್ಟೆ ನೋವಿನ ಬಗ್ಗೆ ಹೇಳಿಕೊಂಡಾಗ ವೈದ್ಯರ ಬಳಿಗೆ ಕರೆದೊಯ್ಯಲಾಗಿದೆ. ಆಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದನ್ನು ವೈದ್ಯರು ತಿಳಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಕಳೆದ ಮೂರು ತಿಂಗಳಿನಿಂದ ಶಿಕ್ಷಕ ತನಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.