ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ ಜಿಲ್ಲೆಗಳಲ್ಲಿ 18 ದೇವಾಲಯಗಳಲ್ಲಿ ಕಳವು ಮಾಡಿದ್ದ ಆರೋಪದಡಿ ಬ್ಯಾಡಗಿ ತಾಲ್ಲೂಕಿನ ಸರ್ಕಾರಿ ಶಾಲೆಯ ಶಿಕ್ಷಕ ಸೇರಿ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯಾಡಗಿ ತಾಲೂಕಿನ ಗಾಳಪೂಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕ ವಸಂತಕುಮಾರ್(40), ರಾಣೇಬೆನ್ನೂರು ತಾಲೂಕು ಗುಡ್ಡದಬೇವಿನಹಳ್ಳಿ ಗ್ರಾಮದ ಸಲೀಂ ಕಮ್ಮಾರ(28) ಬಂಧಿತ ಆರೋಪಿಗಳು.
ಕಳೆದ ಮೂರ್ನಾಲ್ಕು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ, ನಗರ, ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5, ಹಾವೇರಿ ಜಿಲ್ಲೆಯ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ, ಹಂಸಭಾವಿ, ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5 ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಠಾಣೆ, ಬನವಾಸಿ, ಯಲ್ಲಾಪುರ, ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ಪ್ರಕರಣ ಸೇರಿದಂತೆ 18 ದೇವಾಲಯಗಳಲ್ಲಿ ಇವರು ಕಳವು ಮಾಡಿದ್ದರು.
ಬಂಧಿತರಿಂದ ಒಂದು ಕಾರು, ಒಂದು ಬೈಕ್, 2.29 ಲಕ್ಷ ರೂ. ನಗದು, 9 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ, 140 ಗಂಟೆ, 27 ದೀಪದ ಕಂಬ, 22 ಹಿತ್ತಾಳೆಯ ತೂಗುದೀಪ, ತಾಮ್ರದ ಕೊಡಗಳು, ಪೂಜಾ ಸಾಮಗ್ರಿ ಸೇರಿದಂತೆ 19.20 ಲಕ್ಷ ರೂ. ಬೆಲೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹಿರೇಕೆರೂರಿನ ತಾಲ್ಲೂಕಿನ ವಸಂತಕುಮಾರ್ 2007 ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದ್ದು, ಶಿರಸಿ ತಾಲ್ಲೂಕಿನ ಬೇರೆ ಬೇರೆ ಕಡೆ ಕೆಲಸ ಮಾಡಿದ್ದ. ಕಳೆದ ಮಾರ್ಚ್ ನಲ್ಲಿ ಗಾಳಪೂಜೆ ಶಾಲೆಗೆ ವರ್ಗಾವಣೆಯಾಗಿದ್ದ ಶಾಲೆಗೆ ಅನಧಿಕೃತವಾಗಿ ಗೈರುಹಾಜರಾಗಿದ್ದ. ಈತ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.