ಮಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಎರಡು ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದ ಆರೋಪದ ಮೇಲೆ ಕಾಸರಗೋಡಿನ ಶಾಲಾ ಶಿಕ್ಷಕಿ, ಡಿವೈಎಫ್ಐ ಮಾಜಿ ನಾಯಕಿ ಸಚಿತಾ ರೈ ಅವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಸಚಿತಾ ರೈ ಅವರ ವಿರುದ್ಧ ಕರ್ನಾಟಕ, ಕೇರಳ ಪೊಲೀಸ್ ಠಾಣೆಗಳಲ್ಲಿ 12ಕ್ಕೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ. ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಎಸ್‌ಬಿಐ, ಕೇಂದ್ರೀಯ ವಿವಿ ಮುಂತಾದ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಹಲವರಿಂದ ಎರಡು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಚಿತಾ ರೈ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕುಂಬಳೆ ಕಿದೂರಿನ ನಿಶ್ಮಿತಾ ಶೆಟ್ಟಿ ನೀಡಿದ ದೂರಿನ ಅನ್ವಯ ಸಚಿತಾ ರೈ ಅವರನ್ನು ಬಂಧಿಸಲಾಗಿದೆ.