ತಿರುವನಂತಪುರಂ: ಮುಸ್ಲಿಮರು ನಡೆಸುತ್ತಿರುವ ರೆಸ್ಟೊರೆಂಟ್ ಗಳಲ್ಲಿ ಮಾರಾಟವಾಗುವ ಚಹಾದಲ್ಲಿ ದೌರ್ಬಲ್ಯಕ್ಕೆ ಕಾರಣವಾಗುವ ಹನಿಗಳು ಸೇರಿವೆ ಎಂದು ಆರೋಪಿಸಿರುವ ಕೇರಳದ ಹಿರಿಯ ರಾಜಕಾರಣಿ ಮತ್ತು ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಶುಕ್ರವಾರ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇರಳದ ಕಾಂಗ್ರೆಸ್ ಮಾಜಿ ನಾಯಕ, ದೇಶದ ನಿಯಂತ್ರಣಕ್ಕಾಗಿ ಪುರುಷರು ಮತ್ತು ಮಹಿಳೆಯರನ್ನು ‘ಬಂಜರು’ ಮಾಡಲು ಈ ರೀತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೇರಳದ ಪೂಂಜಾರ್ ಕ್ಷೇತ್ರದ ಮಾಜಿ ಶಾಸಕ ಜಾರ್ಜ್, ರಾಜ್ಯದ ಮುಸ್ಲಿಮೇತರರು ಮುಸ್ಲಿಮರು ನಡೆಸುವ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡುವುದನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.
70 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ತಮ್ಮ ಭಾಷಣದಲ್ಲಿ, ಮುಸ್ಲಿಮರು ಆಹಾರಕ್ಕೆ ಉಗುಳಿದ ನಂತರ ಬಡಿಸಿದ್ದಾರೆ. ನಾವು ಅವರ ಉಗುಳನ್ನು ಏಕೆ ತಿನ್ನಬೇಕು ? ಅವರು ಹಣವನ್ನು ಜೇಬಿಗಿಳಿಸಲು ಮುಸ್ಲಿಮೇತರ ಪ್ರದೇಶಗಳಲ್ಲಿ ವ್ಯಾಪಾರ ಸ್ಥಾಪಿಸಿದ್ದಾರೆ ಎಂದು ಜಾರ್ಜ್ ಆರೋಪಿಸಿದ್ದಾರೆ.
33 ವರ್ಷಗಳ ಕಾಲ ಪೂಂಜಾರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಹಿರಿಯ ರಾಜಕಾರಣಿ ಕೇರಳ ಕಾಂಗ್ರೆಸ್ ತೊರೆದ ನಂತರ ಕೇರಳ ಜನಪಕ್ಷಂ ಸೆಕ್ಯುಲರ್ ಎಂಬ ಪಕ್ಷವನ್ನು ಸ್ಥಾಪಿಸಿದರು.
ಪಿಸಿ ಜಾರ್ಜ್ ಹೇಳಿಕೆಗೆ ವಿರೋಧ
ಜಾರ್ಜ್ ಅವರ ಹೇಳಿಕೆಗೆ ಕೇರಳದ ವಿವಿಧ ವಲಯಗಳು ಮತ್ತು ರಾಜಕಾರಣಿಗಳಿಂದ ವಿರೋಧ ವ್ಯಕ್ತವಾಗಿದ್ದು, ಅವರು ಹೇಳಿಕೆಯನ್ನು ಹಿಂಪಡೆದು ಸಮುದಾಯದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇರಳದಲ್ಲಿ ಕೋಮು ಧ್ರುವೀಕರಣವನ್ನು ಸೃಷ್ಟಿಸುವ ಎಲ್ಲಾ ಪ್ರಯತ್ನಗಳ ವಿರುದ್ಧ ಜನರು ಒಟ್ಟಾಗಿ ನಿಲ್ಲಬೇಕೆಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕರೆ ನೀಡಿದರು.
ಮಾಜಿ ಶಾಸಕರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಕೋಮುಭಾವನೆ ಕೆರಳಿಸುವ ಮತ್ತು ಸಮಾಜದಲ್ಲಿ ಆಳವಾದ ಒಡಕು ಮೂಡಿಸುವ ಉದ್ದೇಶದಿಂದ ಜಾರ್ಜ್ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಆರೋಪಿಸಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ನ ಯುವ ಸಂಘಟನೆಯಾದ ಮುಸ್ಲಿಂ ಯೂತ್ ಲೀಗ್ ಜಾರ್ಜ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದೆ.