ಬೆಂಗಳೂರು: ಚಹಾ ಪುಡಿಯಲ್ಲಿಯೂ ಕೃತಕ ಬಣ್ಣ, ಕೆಮಿಕಲ್ ಬಳಸಲಾಗುತ್ತಿದ್ದು, ಇಂತಹ ಟೀ ಪುಡಿಯನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಪಾನಿಪುರಿ, ಕಬಾಬ್ ಗಳಲ್ಲಿ ಕೃತಕ ಬಣ್ಣ, ಕೆಮಿಕಲ್ ಬಳಕೆ ಹಿನ್ನೆಲೆಯಲ್ಲಿ ಇಂತಹ ಕೃತಕ ಬಣ್ಣ, ರಾಸಾಯನಿಕ ಬಳಕೆಗೆ ನಿಷೇಧ ಹೇರಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಚಹಾ ಪುಡಿಯಲ್ಲಿಯೂ ಬಣ್ಣ, ರಾಸಾಯಾನಿಕ, ಮರದ ಪುಡಿಗಳನ್ನು ಬಳಸುತ್ತಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದು, ಬೆಂಗಳೂರಿನ ಹಲವೆಡೆಗಳಲ್ಲಿ ಟೀ ಪುಡಿಯಲ್ಲಿ ಕೃತಕ ಬಣ್ಣ, ಕೆಮಿಕಲ್ ಅಷ್ಟೇ ಅಲ್ಲ ಮರದ ಪುಡಿಗಳನ್ನು ಬೆರೆಸಲಾಗುತ್ತಿದೆ. ರುಚಿ ಹೆಚ್ಚಿಸಲು ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಇಂಥಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಟೀ ಪುಡಿಯಲ್ಲಿ ಕೃತಕ ಬಣ್ಣ, ರಾಸಾಯನಿಕ ಬಳಕೆ ಹಿನ್ನೆಲೆಯಲ್ಲಿ ಅಂತಹ ಟೀ ಪುಡಿಯನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ. ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯಿಂದ ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಬ್ಯಾನ್ ಆದೇಶ ಹೊರಡಿಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಸಂಗ್ರಹಿಸಿದ್ದ 49 ಟೀ ಪುಡಿ ಸ್ಯಾಂಪಲ್ ಗಳ ಪೈಕಿ 45 ಟೀ ಪುಡಿ ಅಸುರಕ್ಷಿತವಾಗಿರುವುದು ಕಂಡುಬಂದಿದೆ. ಟೀ ಪೌಡರ್ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿ ಚಹಾ ಬಣ್ಣ ಹೆಚ್ಚಿಸಲು ಕೆಮಿಕಲ್ ಬಳಕೆ ಮಾಡಲಾಗುತ್ತಿದೆ. ರಸ್ತೆ ಬದಿಯ ಕೆಲ ಅಂಗಡಿಗಳಲ್ಲಿ ತೂಕ ಹೆಚ್ಚಿಸಲು ಟೀ ಪುಡಿಯಲ್ಲಿ ಮರದ ಪುಡಿಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಇದು ಕೂಡ ಕ್ಯಾನ್ಸರ್ ಕಾರಕ ಅಂಶಗಳನ್ನು ಹೊಂದಿರುವುದು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಟೀ ಪುಡಿಗೆ ಬಳಸುವ ಕೆಮಿಕಲ್, ಕ್ಯಾನ್ಸರ್ ಕಾರಕ ಅಂಶಗಳ ಬಳಕೆ ಬ್ಯಾನ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.