ದೇಶದಲ್ಲಿ ಹಾಗೂ ಪ್ರಪಂಚದಲ್ಲಿ ಕೋವಿಡ್-19 ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ 18 ತಿಂಗಳ ನಂತರ ಕಚೇರಿಯ ಬಾಗಿಲು ತೆರೆಯುತ್ತಿವೆ.
ಭಾರತದಲ್ಲಿ ದಾಖಲೆಯ ಲಸಿಕೆ ಹಾಕುತ್ತಿರುವುದರಿಂದ ಐಟಿ-ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ, ಕೆಲವೊಂದು ಬದಲಾವಣೆಗಳೊಂದಿಗೆ ಮರಳಿ ಕಚೇರಿಗೆ ಬರುವಂತೆ ಸೂಚಿಸಿವೆ. 2-3 ದಿನಗಳವರೆಗೆ ಮನೆಯಿಂದ, ಮುಂದಿನ 2-3 ದಿನಗಳವರೆಗೆ ಕಚೇರಿಯಿಂದ ಕೆಲಸ ಆರಂಭಿಸುವಂತೆ ಸೂಚನೆ ನೀಡಿವೆ. ಟಿಸಿಎಸ್, ವಿಪ್ರೋ, ಆಪಲ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಕೇಳಿಕೊಂಡಿದೆ.
ವಿಪ್ರೋ :
ಕೋವಿಡ್-19 ಸಾಂಕ್ರಾಮಿಕ ನಡುವೆ 18 ತಿಂಗಳು ಮನೆಯಿಂದ ಕೆಲಸ ಮಾಡಿದ ನಂತರ ಉದ್ಯೋಗಿಗಳು ಸೋಮವಾರದಿಂದ (ವಾರಕ್ಕೆ ಎರಡು ಬಾರಿ) ಕಚೇರಿಗೆ ಮರಳುತ್ತಾರೆ. ಎಲ್ಲರಿಗೂ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು. ಅಲ್ಲದೆ ಕೋವಿಡ್ ಸುರಕ್ಷತಾ ಪ್ರೋಟೋಕಾಲ್ ಪಾಲಿಸಲಾಗುವುದು ಎಂದು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ ಜಿ ಹೇಳಿದ್ದಾರೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ :
ಭಾರತದ ಸಾಫ್ಟ್ ವೇರ್ ದೈತ್ಯವು ಶೇ.80 ರಷ್ಟು ಉದ್ಯೋಗಿಗಳನ್ನು ಮರಳಿ ಕಚೇರಿಯಿಂದ ಕೆಲಸ ಮಾಡಲು ಯೋಜಿಸುತ್ತಿದೆ. ಕಂಪನಿಯು ತನ್ನ ಉದ್ಯೋಗಿಗಳಲ್ಲಿ ಶೇ.90ರಷ್ಟು ಜನ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದೆ.
ಇನ್ಫೋಸಿಸ್ :
ಇನ್ಫೋಸಿಸ್ ಕೂಡ ತನ್ನ ಕಚೇರಿಗಳನ್ನು ಮರಳಿ ತೆರೆಯಲು ಯೋಜಿಸುತ್ತಿವೆ. ಕೊರೋನಾ 3ನೇ ಅಲೆಯ ಭೀತಿಯ ನಡುವೆಯೂ ತನ್ನ ಉದ್ಯೋಗಿಗಳ ಸುರಕ್ಷತೆಯೊಂದಿಗೆ ಕಚೇರಿಯಿಂದ ಉದ್ಯೋಗಿಗಳು ಕೆಲಸ ಮಾಡುವ ಬಗ್ಗೆ ಯೋಜಿಸುತ್ತಿದ್ದು, 2.6 ಲಕ್ಷ ಉದ್ಯೋಗಿಗಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತಿದೆ. ಅಲ್ಲದೆ, ಉದ್ಯೋಗಿಗಳು ಕೂಡ ಕಚೇರಿಗೆ ಬಂದು ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ ಎಂಬುದಾಗಿ ಸಾಫ್ಟ್ ವೇರ್ ಕಂಪನಿ ತಿಳಿಸಿದೆ.
ಎಚ್ ಸಿಎಲ್ ಟೆಕ್ :
ಪ್ರಮುಖ ಐಟಿ ಸೇವಾ ಕಂಪನಿ ಎಚ್ ಸಿ ಎಲ್ ಟೆಕ್ ತನ್ನ ಪ್ರತಿಸ್ಪರ್ಧಿಗಳ ಹಾದಿಯಲ್ಲೇ ಸಾಗುತ್ತಿದೆ. ಭಾರತದಲ್ಲಿ ಪ್ರಸ್ತುತ ಶೇ. 3 ರಷ್ಟು ಉದ್ಯೋಗಿಗಳು ಮಾತ್ರ ಕಚೇರಿಗೆ ಬರುತ್ತಿದ್ದು, ಉಳಿದವರು ಮನೆಯಿಂದಲೇ ಕೆಲಸ ಮಾಡುತ್ತಿರುವುದಾಗಿ ಎಚ್ ಸಿ ಎಲ್ ಟೆಕ್ನಾಲಜೀಸ್ ಚೀಫ್ ಹ್ಯೂಮನ್ ರಿಸೋರ್ಸಸ್ ಆಫೀಸರ್ ಅಪ್ಪಾರಾವ್ ವಿ.ವಿ. ಹೇಳಿದ್ದಾರೆ.
ಆಪಲ್ :
ಟೆಕ್ ದೈತ್ಯ ಆಪಲ್ ಕೂಡ ಈ ತಿಂಗಳಿನಿಂದ ತನ್ನ ಕಚೇರಿ ತೆರೆಯಲು ಸಜ್ಜಾಗಿದೆ. ಕಂಪನಿಯು ತನ್ನ ಉದ್ಯೋಗಿಗಳು ಕಚೇರಿಯಿಂದ ಮೂರು ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದೆ. ಈ ಬಗ್ಗೆ 2021ರ ಜೂನ್ ನಲ್ಲೇ ಆಪಲ್ ಸಿಇಒ ಟಿಮ್ ಕುಕ್ ಪ್ರಸ್ತಾಪಿಸಿದ್ದರು.
ನಗರ್ರೋ :
ಐಟಿ ಮತ್ತು ಡಿಜಿಟಲ್ ಉತ್ಪನ್ನ ಎಂಜಿನಿಯರಿಂಗ್ ಸಂಸ್ಥೆ ನಗರ್ರೋ ಉದ್ಯೋಗಿಗಳಿಗಾಗಿ ತನ್ನ ಕಚೇರಿಯನ್ನು ಮತ್ತೆ ತೆರೆದಿರುವ ಕಂಪನಿಗಳ ಪಟ್ಟಿಯಲ್ಲಿರುವ ಇನ್ನೊಂದು ಹೆಸರು. ಉದ್ಯೋಗಿಗಳಿಗೆ ತನ್ನ ಗುರುಗ್ರಾಮದ ಕಚೇರಿಯನ್ನು ಮತ್ತೆ ತೆರೆಯುತ್ತಿದೆ ಎಂದು ಕೆಲವು ದಿನಗಳ ಹಿಂದೆ ಕಂಪನಿ ಘೋಷಿಸಿತ್ತು.