
ದೇಶದ ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಡಿಸೆಂಬರ್ 2021ಕ್ಕೆ ಅಂತ್ಯಗೊಂಡಂತೆ ವಾರ್ಷಿಕ ಲೆಕ್ಕಾಚಾರದಲ್ಲಿ $25 ಶತಕೋಟಿ ಆದಾಯ ಕಾಣುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದೆ.
ಇದೇ ವೇಳೆ, ಗುಣಮಟ್ಟದ ಪ್ರತಿಭಾ ಸಂಪನ್ಮೂಲವನ್ನು ಸಂರಕ್ಷಿಸುವ ಉದ್ದೇಶದಿಂದ, 2021-22ರ ವಿತ್ತೀಯ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ತನ್ನ ಸಿಬ್ಬಂದಿ ವರ್ಗದ 1.1 ಲಕ್ಷ ಮಂದಿಗೆ ಬಡ್ತಿ ಕೊಟ್ಟಿದೆ ಟಿಸಿಎಸ್. ಜನವರಿ-ಮಾರ್ಚ್ ಅವಧಿಯಲ್ಲಿ ಕಂಪನಿಯ ಇನ್ನೂ 40,000 ಉದ್ಯೋಗಿಗಳು ಬಡ್ತಿ ಪಡೆಯಲಿದ್ದಾರೆ.
ಶೇರುಗಳ ಮರು ಖರೀದಿಗೆ ಮುಂದಾದ ಟಿಸಿಎಸ್
ಕಳೆದ ತ್ರೈಮಾಸಿಕದಲ್ಲಿ ತನ್ನ ಸಿಬ್ಬಂದಿ ವರ್ಗಕ್ಕೆ ಹೊಸದಾಗಿ 28,328 ಮಂದಿಯನ್ನು ಸೇರಿಸಿಕೊಂಡಿರುವ ಟಿಸಿಎಸ್, ಒಟ್ಟಾರೆ ನೌಕರಬಲವನ್ನು 5,56,986ಕ್ಕೆ ಏರಿಸಿದೆ. ಅದರ ಹಿಂದಿನ ತ್ರೈಮಾಸಿದಲ್ಲಿ ಟಿಸಿಎಸ್ 19,690 ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಂಡಿತ್ತು.
ಪ್ರಸಕ್ತ ವಿತ್ತೀಯ ವರ್ಷದಲ್ಲಿ 78,000ದಷ್ಟು ಹೊಸ ಪ್ರತಿಭೆಗಳನ್ನು ತನ್ನ ಬಳಗಕ್ಕೆ ಸೇರಿಸುವ ಗುರಿಯಲ್ಲಿ ಟಿಸಿಎಸ್ ಸಾಗಿದೆ. ಕಳೆದ ವಿತ್ತೀಯ ವರ್ಷದಲ್ಲಿ 40,000 ಮಂದಿಗೆ ಕೆಲಸ ಕೊಟ್ಟಿದೆ ಟಿಸಿಎಸ್.
ಇದೇ ವೇಳೆ, ಕಂಪನಿ ಬಿಟ್ಟು ಹೋಗುವ ಮಂದಿಯ ಪ್ರಮಾಣವು ಕಳೆದ ತ್ರೈಮಾಸಿಕದಲ್ಲಿ 15.3%ಕ್ಕೆ ಏರಿಕೆಯಾಗಿರುವುದು ಟಿಸಿಎಸ್‌ಗೆ ದೊಡ್ಡ ಸವಾಲಾಗಿದೆ. 2021-22ರ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ 8.6%ನಷ್ಟು ಇದ್ದ ಈ ದರವು ಎರಡನೇ ತ್ರೈಮಾಸಿಕದ ವೇಳೆಗೆ 11.9 ಪ್ರತಿಶತಕ್ಕೆ ಏರಿತ್ತು.