ಬೆಂಗಳೂರು: ಟ್ಯಾಕ್ಸಿ ಚಾಲಕರು, ಮಾಲೀಕರ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಪ್ರಯಾಣ ದರ ಏರಿಕೆಗೆ ಸಮ್ಮತಿ ಸೂಚಿಸಿದೆ.
ಸಿಟಿ ಟ್ಯಾಕ್ಸಿ ಸೇರಿದಂತೆ ಎಲ್ಲಾ ರೀತಿಯ ಟ್ಯಾಕ್ಸಿ ಪ್ರಯಾಣ ದರ ಪ್ರತಿ ಕಿಲೋಮೀಟರ್ಗೆ ಕನಿಷ್ಠ 3.5 ರೂಪಾಯಿಂದ ಗರಿಷ್ಠ 4.5 ರೂಪಾಯಿಯಷ್ಟು ಹೆಚ್ಚಾಗಲಿದೆ. ದರ ಪರಿಷ್ಕರಣೆ ನಂತರ ಹವಾನಿಯಂತ್ರಣ ರಹಿತ ಟ್ಯಾಕ್ಸಿ ಪ್ರಯಾಣದರವನ್ನು ಪ್ರತಿ ಕಿಲೋಮೀಟರ್ಗೆ 18 ರೂ., ಕನಿಷ್ಠ ನಾಲ್ಕು ಕಿಲೋಮೀಟರ್ ವರೆಗೆ 75 ರೂ. ನಿಗದಿಮಾಡಲಾಗಿದೆ.
ಹವಾನಿಯಂತ್ರಿತ ಟ್ಯಾಕ್ಸಿಗೆ ಪ್ರತಿ ಕಿ.ಮೀ.ಗೆ 24 ರೂಪಾಯಿ, ಕನಿಷ್ಠ 4 ಕಿ.ಮೀ.ವರೆಗೆ 100 ರೂ. ನಿಗದಿ ಮಾಡಲಾಗಿದೆ. ಪ್ರಯಾಣ ದರದ ಜೊತೆಗೆ ಟ್ಯಾಕ್ಸಿ ಕಾಯುವಿಕೆ ಮತ್ತು ಲಗೇಜ್ ದರವನ್ನು ಕೂಡ ಪರಿಷ್ಕರಣೆ ಮಾಡಲಾಗಿದೆ. ಮೊದಲ 5 ನಿಮಿಷಗಳವರೆಗೆ ಕಾಯುವುದು ಉಚಿತವಾಗಿದ್ದು, ನಂತರದ ಪ್ರತಿ ಒಂದು ನಿಮಿಷಕ್ಕೆ ಒಂದು ರೂಪಾಯಿ ನಿಗದಿಗೊಳಿಸಲಾಗಿದೆ.
ಲಗೇಜ್ ದರ ಮೊದಲ 120 ಕೆಜಿ ವರೆಗೆ ಉಚಿತವಾಗಿದ್ದು, ನಂತರದಲ್ಲಿ ಪ್ರತಿ 20 ಕೆಜಿಗೆ 7 ರೂ. ನಿಗದಿಪಡಿಸಲಾಗಿದೆ ಮಧ್ಯರಾತ್ರಿ 12 ರಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರಯಾಣ ದರದ ಮೇಲಿನ ಶೇಕಡ 10 ರಷ್ಟು ಹೆಚ್ಚುವರಿ ದರ ನಿಗದಿಗೊಳಿಸಲಾಗಿದೆ ಎಂದು ಹೇಳಲಾಗಿದೆ.