ಹಿಂದೂಗಳು ಸದ್ಯ ಹಬ್ಬದ ಸೀಸನ್ನಲ್ಲಿ ಬ್ಯುಸಿಯಾಗಿದ್ದಾರೆ. ದೀಪಾವಳಿ ಹಬ್ಬ ಕೂಡ ಸಮೀಪಿಸುತ್ತಿದೆ. ಭಾರತದಲ್ಲಿ ಜನರು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುತ್ತವೆ. ಸ್ನೇಹಿತರು ಸಹ ಹಬ್ಬದ ಪ್ರಯುಕ್ತ ಉಡುಗೊರೆಗಳನ್ನ ವಿನಿಮಯ ಮಾಡಿಕೊಳ್ತಾರೆ. ಆದರೆ ನೀವೆಷ್ಟೇ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರೂ ಸಹ ತೆರಿಗೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.
ನೀವು ಉಡುಗೊರೆ ರೂಪದಲ್ಲಿ ಪಡೆದುಕೊಂಡ ವಸ್ತುಗಳನ್ನು ನಿಮ್ಮ ನೇರ ಆದಾಯವೆಂದು ಪರಿಗಣಿಸದೇ ಇದ್ದರೂ ಸಹ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 56(2)ದ ಅಡಿಯಲ್ಲಿ ಇವುಗಳು ತೆರಿಗೆ ಅಡಿಯಲ್ಲಿ ಬಂದು ಬಿಡುತ್ತವೆ. ಹೀಗಾಗಿ ಭಾರೀ ಬೆಲೆಯ ಉಡುಗೊರೆಗಳನ್ನು ಸ್ವೀಕರಿಸುವ ಮುನ್ನ ತೆರಿಗೆಗೆ ಸಂಬಂಧಿಸಿದ ಕೆಲವೊಂದು ನಿಯಮಗಳನ್ನು ನೀವು ತಿಳಿದುಕೊಳ್ಳಲೇಬೇಕು.
ಸಂಬಂಧಿಗಳಿಗೆ ಕೊಡುವ ಉಡುಗೊರೆ
ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಸಂಬಂಧಿಗಳು ಎಂದು ಸ್ವೀಕರಿಸಿದ ಯಾವುದೇ ಉಡುಗೊರೆಗಳಿಗೆ ತೆರಿಗೆ ವಿನಾಯ್ತಿ ಇರುತ್ತದೆ, ಸಂಬಂಧಿ ಎಂದರೆ ವ್ಯಕ್ತಿಯ ಸಂಗಾತಿ, ಸಹೋದರ ಅಥವಾ ಸಹೋದರಿ, ಪೋಷಕರು ಬರುತ್ತಾರೆ.
ಸ್ನೇಹಿತರಿಂದ ಪಡೆದ ಉಡುಗೊರೆ
ಸ್ನೇಹಿತರಿಂದ ಪಡೆದ ಉಡುಗೊರೆಗಳು ಇತರೆ ಮೂಲಗಳಿಂದ ಬಂದ ಆದಾಯದ ಅಡಿಯಲ್ಲಿ ಬರುತ್ತದೆ. ಇವುಗಳನ್ನು ನಿಮ್ಮ ಅದಾಯಕ್ಕೆ ಸೇರಿಸಲಾಗುತ್ತದೆ ಹಾಗೂ ಇದಕ್ಕೆ ತೆರಿಗೆ ಸಹ ಇರುತ್ತದೆ. ವರ್ಷಕ್ಕೆ 50 ಸಾವಿರ ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ ಉಡುಗೊರೆಗಳು ಬಂದರೆ ಅದಕ್ಕೆ ತೆರಿಗೆ ವಿನಾಯ್ತಿ ಇರಲಿದೆ. ಮದುವೆ ಸಂದರ್ಭದಲ್ಲಿ ಸ್ನೇಹಿತರಿಂದ ಸ್ವೀಕರಿಸಿದ ಯಾವುದೇ ಉಡುಗೊರೆಗಳಿಗೆ ತೆರಿಗೆ ಇರೋದಿಲ್ಲ.
ಸಿಬ್ಬಂದಿಗೆ ಕೊಡುವ ಉಡುಗೊರೆ
ಕಂಪನಿಗಳು ನೀಡುವ ಉಡುಗೊರೆಯು ಒಂದು ವರ್ಷಕ್ಕೆ 50 ಸಾವಿರ ರೂಪಾಯಿ ಮೀರುವಂತಿದ್ದರೆ ಇದು ತೆರಿಗೆ ವ್ಯಾಪ್ತಿಯಲ್ಲಿ ಬರಲಿದೆ. ಇದಕ್ಕಿಂತ ಕಡಿಮೆ ಮೌಲ್ಯದ ಉಡುಗೊರೆಗಳು ತೆರಿಗೆ ವ್ಯಾಪ್ತಿಯಲ್ಲಿ ಬರೋದಿಲ್ಲ.