ನವದೆಹಲಿ: ಕೈ ಮೇಲೆ ಇದ್ದ ಟ್ಯಾಟೂ ಪೊಲೀಸ್ ಕಾನ್ಸ್ ಟೇಬಲ್ ಓರ್ವರ ನೇಮಕಾತಿಗೆ ಅಡ್ಡಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬಲಗೈ ಮೇಲೆ ಮಾಸದ ಟ್ಯಾಟೂ ಇದೆ ಎಂಬ ಕಾರಣಕ್ಕೆ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿಯಿಂದ ಕೈಬಿಡಲಾಗಿದ್ದ ಅಭ್ಯರ್ಥಿ ನೆರವಿಗೆ ದೆಹಲಿ ಹೈಕೋರ್ಟ್ ನಿಂತಿದೆ.
ಕೇಂದ್ರ ಅಡಳಿತಾತ್ಮಕ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಸಿಬ್ಬಂದಿ ಆಯ್ಕೆ ಆಯೋಗ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಟ್ಯಾಟೂ ತೆಗೆಯಲು ಅಭ್ಯರ್ಥಿ ಈಗಾಗಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ಗಮನಿಸಿದ ಹೈಕೋರ್ಟ್, ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು.
ವಿಚಾರಣೆಗೆ ಹಾಜರಾದ ಅಭ್ಯರ್ಥಿ ತನ್ನ ಬಲಗೈಲಿದ್ದ ಟ್ಯಾಟೂ ತೆಗೆಯಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದರ ಬಗ್ಗೆ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೇತ್ ಹಾಗೂ ಗಿರೀಶ್ ಕಟಪಾಳಿಯ ಮುಂದೆ ತೋರಿಸಿದ್ದಾನೆ. ಈ ವೇಳೆ ನ್ಯಾಯಾಧೀಶರು, ನಾವು ಅಭ್ಯರ್ಥಿಯ ಬಲಗೈನ್ನು ಖುದ್ದು ಗಮನಿಸಿದ್ದೇವೆ. ಬರಿಗಣ್ಣಿಗೆ ಹಚ್ಚೆ ಸಹ ಕಾಣುವುದಿಲ್ಲ. ಇದನ್ನು ಅರ್ಜಿದಾರರ ಅಧಿಕಾರಿಗಳ ವಕೀಲರಿಗೂ ತೋರಿಸಲಾಗಿದೆ. ನಮ್ಮ ಪ್ರಕಾರ ಅಭ್ಯರ್ಥಿಯ ಮುಂದೋಳಿಗೆ ಸ್ಪಷ್ಟವಾಗಿ ಕಾಣುವ ಟ್ಯಾಟೂ ಇಲ್ಲ. ಆದರೆ ಟ್ಯಾಟೂ ಇದ್ದ ಜಾಗದಲ್ಲಿ ತುಂಬಾ ಮಂದವಾದ ಗಾಯ ಕಂಡು ಬರುತ್ತಿದೆ. ಕೆಲವೊಮ್ಮೆ ಅಂತಹ ಗಾಯಗಳು ಸಹಜ. ಈ ಕಾರಣಕ್ಕಾಗಿ ಅಭ್ಯರ್ಥಿಯನ್ನು ನೇಮಕಾತಿಯಿಂದ ದೂರವಿಡುವುದು ಸರಿಯಲ್ಲ ಎಂದು ಹೇಳಿದೆ.
ಅಭ್ಯರ್ಥಿಗೆ ನೇಮಕಾತಿ ಆದೇಶವನ್ನು ನೀಡಬೇಕು ಎಂದು ದೆಹಲಿ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಅಲ್ಲದೇ ಸಿಬ್ಬಂದಿ ಆಯ್ಕೆ ಆಯೋಗ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.