ಟ್ಯಾಟೂ ಹಾಕಿಸಿಕೊಳ್ಳುವುದು ಯುವ ಜನತೆಗೆ ಪ್ಯಾಷನ್ ಆಗಿದೆ. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಈ ಅಂಶಗಳು ಗಮನದಲ್ಲಿರಲಿ.
* ಸುತ್ತಮುತ್ತ ಇರುವ ಎಲ್ಲರೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಟ್ಯಾಟೂ ಹಾಕಿಸಿಕೊಳ್ಳುವ ಅವಶ್ಯವಿಲ್ಲ. ಜೀವನದುದ್ದಕ್ಕೂ ಜೊತೆಗೇ ಬರುವ ಟ್ಯಾಟೂ ನಮ್ಮ ನಿರ್ಧಾರಕ್ಕೆ ಬಿಟ್ಟಿದ್ದು.
* ಒಮ್ಮೆ ಟ್ಯಾಟೂ ಹಾಕಿಸಿದ ನಂತರ ಅಥವಾ ಕೆಲವು ದಿನಗಳ ನಂತರ ವಿನ್ಯಾಸ ಇಷ್ಟವಾಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಮತ್ತೆ ಲೇಸರ್ ಚಿಕಿತ್ಸೆ ಪಡೆಯಬೇಕಷ್ಟೇ. ಅದರ ಬದಲು ಮುಂಚಿತವಾಗಿ ಡಿಸೈನ್ ಬಗ್ಗೆ ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು.
* ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಳ್ಳುವ ವೇಳೆ ಸಣ್ಣ ವಿನ್ಯಾಸವನ್ನು ಆಯ್ಕೆ ಮಾಡುವುದು ಉತ್ತಮ. ಕೆಲವು ದಿನಗಳ ನಂತರ ಮತ್ತೆ ದೊಡ್ಡ ವಿನ್ಯಾಸಕ್ಕೆ ಪ್ರಯತ್ನಿಸಬಹುದು.
* ದೇಹದ ಯಾವ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂಬುದು ಸಹ ಬಹಳ ಮುಖ್ಯವಾಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಮೀಸಲಿಟ್ಟು ಚಿಂತಿಸಿ ನಂತರ ನಿರ್ಧಾರ ಕೈಗೊಳ್ಳಿ. ಇದು ವಿನ್ಯಾಸದ ಮೇಲೂ ಅನ್ವಯವಾಗುತ್ತದೆ.
* ಸಣ್ಣ ಚುಚ್ಚುಮದ್ದಿಗೆ ಹೆದರುವವರು ಟ್ಯಾಟೂ ಹಾಕಿಸಿಕೊಳ್ಳುವುದು ಕಷ್ಟ. ಸಣ್ಣ ಸೂಜಿಯಿಂದ ಚುಚ್ಚಿ ವಿನ್ಯಾಸ ಮಾಡುವುದರಿಂದ ಮಾನಸಿಕವಾಗಿ ಸಿದ್ಧರಾಗಿ. ಆರಂಭದಲ್ಲಿ ಸ್ವಲ್ಪ ನೋವು ಎನಿಸಿದರು ನಂತರ ಅದು ಅಭ್ಯಾಸವಾಗುತ್ತದೆ.
* ಯಾವ ಕಾಲದಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೀರಿ ಎನ್ನುವುದು ಸಹ ಅತೀ ಮುಖ್ಯವಾಗುತ್ತದೆ. ಬೇಸಿಗೆ ಕಾಲದಲ್ಲಿ ಹಾಕಿಸಿಕೊಂಡರೆ ಬೇಸಿಗೆಯ ಬಿಸಿಲಿಗೆ ಉರಿಯಬಹುದು ಅಥವಾ ಬೆವರಿಗೆ ತುರಿಕೆ ಆರಂಭವಾಗಬಹುದು. ತಂಪಾದ ವಾತಾವರಣ ಇದಕ್ಕೆ ಸೂಕ್ತ.
* ಟ್ಯಾಟೂ ಹಾಕುವ ಉಪಕರಣಗಳ ಸ್ವಚ್ಛತೆ ಹಾಗೂ ಎಲ್ಲಾ ಅಗತ್ಯ ಉಪಕರಣಗಳ ಬಗ್ಗೆ ಪರಿಶೀಲಿಸಬೇಕು.
* ವ್ಯಕ್ತಿಯನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಎಂಬುದು ಮುಖ್ಯವಲ್ಲ. ಮುಂದೆ ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಹೀಗಾಗಿ ಹೆಸರು ಮತ್ತು ಅಕ್ಷರ ಹಾಕಿಸಿ ಕೊಳ್ಳುವ ಮುನ್ನ ಯೋಚಿಸಿ.