ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರಿ ಏರಿಕೆ ಕಂಡು ಜನರ ಜೇಬಿಗೆ ದೊಡ್ಡ ಕತ್ತರಿ ಹಾಕುತ್ತಿರುವ ನಡುವೆ ಎಲೆಕ್ಟ್ರಿಕ್ ಕಾರುಗಳು ಮತ್ತು ಸಂಕುಚಿತ ನೈಸರ್ಗಿಕ ಇಂಧನ (ಸಿಎನ್‌ಜಿ) ಚಾಲಿತ ದ್ವಿಚಕ್ರ, ತ್ರಿಚಕ್ರ ಹಾಗೂ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಲಾಭ ಪಡೆಯಲು ಭಾರತ ಮತ್ತು ವಿದೇಶಿ ಆಟೋಮೊಬೈಲ್ ಕ್ಷೇತ್ರದ ಕಂಪನಿಗಳು ತುದಿಗಾಲಲ್ಲಿ ನಿಂತಿವೆ. ಅದಕ್ಕೆ ಪೂರಕವಾಗಿ ಸದ್ಯ ಮಾರುಕಟ್ಟೆಯಲ್ಲಿರುವ ತಮ್ಮ ಕಾರುಗಳಿಗೆ ಸಿಎನ್ಜಿ ಚಾಲಿತ ಇಂಜಿನ್ ಅಳವಡಿಸುತ್ತಿವೆ, ಇಲ್ಲವೇ ಎಲೆಕ್ಟ್ರಿಕ್ ಚಾಲಿತ ಬ್ಯಾಟರಿ ಆಧರಿತ ರೂಪಗಳನ್ನು ನೀಡುತ್ತಿವೆ. ಇವುಗಳ ಪೈಕಿ ಜನರ ಮನಸ್ಸಿನಲ್ಲಿ ವಿಶ್ವಾಸ ಮೂಡಿಸಿರುವುದು ಟಾಟಾ ಮೋಟಾರ್ಸ್.
ಇತ್ತೀಚೆಗಷ್ಟೇ ಕಂಪನಿಯು ತನ್ನ ಸ್ಮಾಲ್ ಕಾರ್ ಶ್ರೇಣಿಯ ಟಿಯಾಗೊ ಹಾಗೂ ಮಿನಿ ಸೆಡಾನ್ ಶ್ರೇಣಿಯ ಟಿಗಾರ್ ಮಾಡೆಲ್ ಗಳನ್ನು ಪೂರ್ಣ ಎಲೆಕ್ಟ್ರಿಕ್ ಚಾಲಿತ ಕಾರುಗಳಾಗಿ ಮಾರ್ಪಡಿಸಿದೆ. ಸದ್ಯ, ಸಿಎನ್‌ಜಿ ಚಾಲಿತ ಮಾದರಿಗಳಾಗಿ ಇವುಗಳನ್ನೇ ಮಾರ್ಪಡಿಸಲು ಸಿದ್ಧತೆಯಲ್ಲಿದೆ. ತಿಂಗಳಲ್ಲಿ ಸಿಎನ್‌ಜಿ ಮಾದರಿಗಳು ರಸ್ತೆಗಿಳಿದರೆ ಅಚ್ಚರಿ ಇಲ್ಲ.
ಆದರೆ, ಜನರ ಮನಗೆದ್ದಿರುವ ಟಾಟಾದ ವಿಶ್ವಾಸಾರ್ಹ ಎಸ್ಯುವಿ “ನೆಕ್ಸಾನ್” ಬಗ್ಗೆ ದೇಶದ ಬಹುತೇಕ ಜನರ ಗಮನವಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಮಾಡೆಲ್ ಸದ್ಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ. ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಇವಿ ಎಸ್‌ಯುವಿ ಎಂಬ ಹೆಗ್ಗಳಿಕೆ ನೆಕ್ಸಾನ್‌ಗೆ ಇದೆ. ಇದೇ ಮಾದರಿಗೆ ಮುಂದೆ ಸಿಎನ್‌ಜಿ ಬಂದರೆ ಹೇಗಿರಬಹುದು..! ಹೌದು, ದಿಲ್ಲಿ, ಮುಂಬಯಿ ಸೇರಿದಂತೆ ಅನೇಕ ಮಹಾನಗರಗಳ ಜನರು ‘ಸಿಎನ್‌ಜಿ ನೆಕ್ಸಾನ್’ ಮಾದರಿಗೆ ಎದುರು ನೋಡುತ್ತಿದ್ದಾರೆ.
ಸಿಎನ್‌ಜಿ ಮಾತ್ರವಲ್ಲ ಪೆಟ್ರೋಲ್ ಹೈಬ್ರಿಡ್ ಮಾಡೆಲ್ ಮೇಲೆ ಕೂಡ ಟಾಟಾ ಮೋಟಾರ್ಸ್ ಸಂಶೋಧನೆ ನಡೆಸುತ್ತಿದೆ. ಇದು ಯಶಸ್ವಿಯಾದಲ್ಲಿ 1.2 ಲೀಟರ್ ಟರ್ಬೋಚಾರ್ಜ್ ಮತ್ತು 1.5 ಲೀಟರ್ ಟರ್ಬೋಚಾರ್ಜ್ ಡೀಸೆಲ್ ನೆಕ್ಸಾನ್ ಮಾಡೆಲ್ ಗಳು ಮುಂದಿನ ಮೂರು ತಿಂಗಳಲ್ಲಿ ರಸ್ತೆಗಿಳಿಯಲಿವೆ.