ಮಾರುತಿ ಸುಜುಕಿ, ಹುಂಡೈ ಮತ್ತು ಮಹೀಂದ್ರಾ & ಮಹೀಂದ್ರಾ ಕಳೆದೆರಡು ವಾರಗಳ ಹಿಂದೆ ತಮ್ಮ ವಾಹನಗಳ ಬೆಲೆ ಹೆಚ್ಚಳ ಮಾಡಿವೆ. ಇಂದು ಭಾರತದ ಮೂರನೇ ಅತಿದೊಡ್ಡ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ವಾಹನಗಳ ಮೇಲೆ ಬೆಲೆ ಏರಿಕೆಯನ್ನು ಘೋಷಿಸಿದೆ.
ನಾಳೆಯಿಂದ ಅಂದರೆ, ಜನವರಿ 19, 2022 ರಿಂದ, ವೇರಿಯಂಟ್ ಮತ್ತು ಮಾಡೆಲ್ ಅವಲಂಬಿಸಿ ಸರಾಸರಿ ಶೇಕಡಾ 0.9% ಹೆಚ್ಚಳವನ್ನು ಜಾರಿಗೆ ತರಲಾಗುವುದು ಎಂದು ಟಾಟಾ ಮೋಟಾರ್ಸ್ ಮಾಹಿತಿ ನೀಡಿದೆ. ಇದೇ ಸಮಯದಲ್ಲಿ, ಗ್ರಾಹಕರ ಫೀಡ್ಬ್ಯಾಕ್ ಗೆ ಪ್ರತಿಕ್ರಿಯೆಯಾಗಿ ಕೆಲವು ವೇರಿಯಂಟ್ ಗಳ ಮೇಲೆ 10,000 ರೂ. ವರೆಗೆ ಕಡಿತ ಮಾಡಲಾಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿಕೆ ನೀಡಿದೆ.
ಉಕ್ಕು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆಗಳ ನಿರಂತರ ಏರಿಕೆಯಿಂದ ವಾಹನ ತಯಾರಕ ಕಂಪನಿಗಳು ಬೆಲೆ ಏರಿಸಲೇಬೇಕಾಗಿದೆ. 2021 ಸೇರಿದಂತೆ ಈ ವರ್ಷ ಈಗಾಗಲೇ ಮೂರ್ನಾಲ್ಕು ಬಾರಿ ಏರಿಕೆಯಾಗಿದೆ. ಈ ಏರಿಕೆಗಳು ಉದ್ಯಮದ ಎಲ್ಲಾ ವಿಭಾಗಗಳ ಮೇಲೆ ಪರಿಣಾಮ ಬೀರಿದ್ದು, ಪ್ರಯಾಣಿಕ ವಾಹನಗಳು, ವಾಣಿಜ್ಯ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಬೆಲೆಯಲ್ಲೂ ಬದಲಾವಣೆಯಾಗಿದೆ.
ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಸರಾಸರಿ 1.7 ರಷ್ಟು ಬೆಲೆಗಳನ್ನು ಹೆಚ್ಚಿಸಿದೆ. ಈ ಹೊಸ ಬೆಲೆಗಳು ಜನವರಿ 15 ರಿಂದ ಜಾರಿಗೆ ಬಂದಿವೆ. ಕೊರಿಯಾದ ಕಾರ್ ಬ್ರ್ಯಾಂಡ್ ಹುಂಡೈ ಕ್ರೆಟಾ, ವೆನ್ಯೂ ಮತ್ತು ಅಲ್ಕಾಜರ್‌ಗಳ ಬೆಲೆಗಳನ್ನು 2,000 ರಿಂದ 21,000 ರೂ. ಗೆ ಹೆಚ್ಚಿಸಿದೆ. ಎಸ್‌ಯುವಿ ಸ್ಪೆಷಲಿಸ್ಟ್ ಮಹೀಂದ್ರಾ & ಮಹೀಂದ್ರಾ 21,000 ರಿಂದ 81,000ರೂ. ವರೆಗೆ ಬೆಲೆಗಳನ್ನು ಹೆಚ್ಚಿಸಿದೆ.