ಬೆಂಗಳೂರು: ಟಾಟಾ ಗ್ರೂಪ್ ಅತಿ ದೊಡ್ಡ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು 45 ಸಾವಿರ ಮಹಿಳೆಯರಿಗೆ ನೌಕರಿ ಸಿಗಲಿದೆ. ಬೆಂಗಳೂರಿನ ಹೊಸೂರಿನಲ್ಲಿರುವ ಐ-ಪೋನ್ ಬಿಡಿ ಭಾಗಗಳ ಉತ್ಪಾದನೆ ಘಟಕಕ್ಕೆ ನೇಮಕಾತಿ ಇದಾಗಿದೆ.
ಸದ್ಯದ ಮಾಹಿತಿ ಪ್ರಕಾರ ಟಾಟಾ ಗ್ರೂಪ್ ಹೊಸೂರು ಘಟಕಕ್ಕಾಗಿಯೇ 45 ಸಾವಿರ ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಲಿದೆ. ಮುಂದಿನ 18 ರಿಂದ 24 ತಿಂಗಳಿನಲ್ಲಿ ಈ ನೇಮಕಾತಿ ನಡೆಯಲಿದೆ. ಟಾಟಾ ಮತ್ತು ಆಪಲ್ ಜಂಟಿಯಾಗಿ ಐ-ಫೋನ್ ಘಟಕದ ನೇಮಕಾತಿ ನಡೆಸಲಿವೆ ಎಂದು ತಿಳಿದುಬಂದಿದೆ.
ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹೊಸೂರಿನಲ್ಲಿ ತಮಿಳುನಾಡು ಸರ್ಕಾರದಿಂದ ಭೂಮಿ ಪಡೆದು ಟಾಟಾ ಗ್ರೂಪ್ ಘಟಕ ನಿರ್ಮಾಣ ಮಾಡಿದೆ. ಟಾಟಾ ಮತ್ತು ಆಪಲ್ ಸಂಸ್ಥೆ ಜಂಟಿಯಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದ್ದು, ದಿನಾಂಕವನ್ನು ಇನ್ನಷ್ಟೇ ಘೋಷಣೆ ಮಾಡಬೇಕಿದೆ. ಸುಮಾರು 500 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣ ಮಾಡಲಾಗಿದೆ. ಕಂಪೆನಿಯಲ್ಲಿ ಸದ್ಯ 10 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ಇವರ ಪೈಕಿ ಮಹಿಳೆಯರೇ ಹೆಚ್ಚು. ಈಗ ಮುಂದಿನ ನೇಮಕಾತಿಯಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ದೊರೆಯಲಿದೆ ಎನ್ನಲಾಗಿದೆ.