ಪರೋಟಾ ಹೆಸ್ರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಆಲೂಗಡ್ಡೆ ಪರೋಟಾ, ಗೋಬಿ ಪರೋಟಾ, ಮೆಂತ್ಯೆ ಪರೋಟಾ ಹೀಗೆ ಬೇರೆ ಬೇರೆ ತರಕಾರಿಗಳನ್ನು ಬಳಸಿ ರುಚಿ ರುಚಿ ಪರೋಟಾವನ್ನು ತಯಾರಿಸಬಹುದು. ಇಂದು ಆಲೂಗಡ್ಡೆ, ಪುದೀನಾ ಪರೋಟಾ ತಯಾರಿಸುವ ವಿಧಾನವನ್ನು ನಾವು ಹೇಳ್ತೇವೆ.
ಆಲೂ-ಪುದೀನಾ ಪರೋಟಾ ತಯಾರಿಸಲು ಬೇಕಾಗುವ ಪದಾರ್ಥ:
ಬೇಯಿಸಿದ ಎರಡು ಆಲೂಗಡ್ಡೆ
ಒಂದು ಕಪ್ ಪುದೀನಾ ಎಲೆ
2 ಕಪ್ ಗೋಧಿ ಹಿಟ್ಟು
1 ಕಪ್ ಮೈದಾ
2 ಈರುಳ್ಳಿ ( ಕತ್ತರಿಸಿದ್ದು)
1 ಚಮಚ ಕೆಂಪು ಮೆಣಸಿನ ಪುಡಿ
1 ಚಮಚ ಕೊತ್ತಂಬರಿ ಪುಡಿ
1 ಚಮಚ ಗರಂ ಮಸಾಲಾ ಪುಡಿ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಸ್ವಲ್ಪ
ನೀರು ಸ್ವಲ್ಪ
ತುಪ್ಪ ಸ್ವಲ್ಪ
ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ
ಆಲೂಗಡ್ಡೆ – ಪುದೀನಾ ಪರೋಟಾ ಮಾಡುವ ವಿಧಾನ :
ಒಂದು ಪಾತ್ರೆಗೆ ಗೋಧಿ ಹಿಟ್ಟು, ಮೈದಾ ಹಿಟ್ಟನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ತುಪ್ಪ, ಉಪ್ಪು ಮತ್ತು ನೀರನ್ನು ಹಾಕಿ ರೊಟ್ಟಿ ಹದ ಮಾಡಿಕೊಳ್ಳಿ.
ಇನ್ನೊಂದು ಪಾತ್ರೆಗೆ ಆಲೂಗಡ್ಡೆಯನ್ನು ಹಾಕಿ ಮ್ಯಾಶ್ ಮಾಡಿ. ಅದಕ್ಕೆ ಕತ್ತರಿಸಿದ ಪುದೀನಾ, ಮೆಣಸಿನ ಪುಡಿ, ಗರಂ ಮಸಾಲಾ, ಕೊತ್ತಂಬರಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಕಲಸಿಕೊಂಡ ಹಿಟ್ಟನ್ನು ಉಂಡೆ ಆಕಾರದಲ್ಲಿ ಮಾಡಿ ಲಟ್ಟಿಸಿ. ಸ್ವಲ್ಪ ಲಟ್ಟಿಸಿದ ಮೇಲೆ ಆಲೂ ಮಿಶ್ರಣದ ಸಣ್ಣ ಉಂಡೆಯನ್ನು ಇದ್ರ ಒಳಗೆ ಇಟ್ಟು, ಲಟ್ಟಿಸಿದ ಗೋಧಿ ಹಿಟ್ಟನ್ನು ಮತ್ತೆ ಉಂಡೆ ಮಾಡಿ. ಸ್ವಲ್ಪ ಎಣ್ಣೆ ಹಾಕಿ ನಿಧಾನವಾಗಿ ಲಟ್ಟಿಸಿ. ನಂತ್ರ ಬಿಸಿ ಮಾಡಿದ ತವಾಕ್ಕೆ ಪರೋಟಾವನ್ನು ಹಾಕಿ, ಸುತ್ತ ಎಣ್ಣೆ ಹಾಕಿ ಬೇಯಿಸಿ. ಬೆಂದ ಪರೋಟಾ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ.