ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸಾ ದರ ಪಟ್ಟಿ ಪ್ರದರ್ಶಿಸುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸೂಚನೆ ನೀಡಿದ್ದಾರೆ.
ಕೆಪಿಎಂಇ ಕಾಯ್ದೆಯಡಿ ರಾಜ್ಯದ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಹೊರ ರೋಗಿ ವಿಭಾಗದ ಸಮಾಲೋಚನಾ ಶುಲ್ಕ, ಶಸ್ತ್ರ ಚಿಕಿತ್ಸೆ, ಎಕ್ಸ್ ರೇ, ಸ್ಕ್ಯಾನಿಂಗ್ ಮೊದಲಾದ ವೈದ್ಯಕೀಯ ಪರೀಕ್ಷೆಗಳ ಶುಲ್ಕದ ವಿವರವನ್ನು ಪ್ರದರ್ಶಿಸಬೇಕು. ದರ ಫಲಕವು ಮುಖ್ಯ ದ್ವಾರದ ಪ್ರಮುಖ ಸ್ಥಳದಲ್ಲಿ ಸುಲಭವಾಗಿ ಕಾಣುವಂತೆ ಇರಬೇಕು. ಚಿಕಿತ್ಸೆಯ ದರ ಪಟ್ಟಿಯಲ್ಲಿ ಪ್ರದರ್ಶಿಸಿದ ಪ್ರಕಾರ ರೋಗಿಗಳಿಂದ ನಿಗದಿತ ಶುಲ್ಕ ಪಡೆಯಬೇಕಿರುವುದು ಕಡ್ಡಾಯವಾಗಿದ್ದರೂ ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸಾ ದರ ಪಟ್ಟಿಯನ್ನು ರೋಗಿಗಳಿಗೆ ಕಾಣುವ ಸ್ಥಳದಲ್ಲಿ ಪ್ರದರ್ಶಿಸದ ಬಗ್ಗೆ ಮತ್ತು ಹೆಚ್ಚುವರಿ ಶುಲ್ಕ ವಿಧಿಸುತ್ತಿರುವ ಬಗ್ಗೆ ದೂರು ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ.
ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಚಿಕಿತ್ಸಾ ದರ ಪಟ್ಟಿಗಳನ್ನು ಪ್ರದರ್ಶಿಸುವಂತೆ ಎಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಬೇಕು ಎಂದು ತಿಳಿಸಿದ್ದಾರೆ.
ದರ ಪಟ್ಟಿ ಪ್ರದರ್ಶಿಸದ ಆಸ್ಪತ್ರೆಗಳ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಅನುಪಾಲನಾ ವರದಿಯನ್ನು ಮಾರ್ಚ್ 20ರೊಳಗೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.