ರೈಲಿನಲ್ಲಿ ಪ್ರಯಾಣಿಸುವ ಮಧ್ಯಮವರ್ಗ ಕುಟುಂಬದ ಜೇಬಿಗೆ ಮತ್ತೆ ಕತ್ತರಿ ಬೀಳುವ ನಿರೀಕ್ಷೆಯಿದೆ. ಬಿಜೆಪಿ ಸಂಸದ ಸಿ.ಎಂ. ರಮೇಶ್ ಅಧ್ಯಕ್ಷತೆಯ ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ, ಎಸಿ ದರ್ಜೆಯ ಟಿಕೆಟ್ ದರ ಹೆಚ್ಚಳಕ್ಕೆ ಶಿಫಾರಸು ಮಾಡಿದೆ.
ಡಿಸೆಂಬರ್ 13 ರಂದು ಸಂಸದೀಯ ಸಮಿತಿಯು ಅನುದಾನಕ್ಕಾಗಿ ರೈಲ್ವೆ ಬೇಡಿಕೆಗಳ ಕುರಿತು ತನ್ನ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿತು. ರೈಲಿನ ಸಾಮಾನ್ಯ ವರ್ಗವು ಸಾಮಾನ್ಯ ಜನರಿಗೆ ಪ್ರಮುಖವಾಗಿದೆ ಮತ್ತು ಕೈಗೆಟುಕುವ ದರದಲ್ಲಿ ಅದನ್ನು ಇಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಆದಾಗ್ಯೂ ಆರ್ಥಿಕ ನಷ್ಟವನ್ನು ಪರಿಹರಿಸಲು ಸಮಿತಿಯು ಎಸಿ ಕೋಚ್ ಗಳಲ್ಲಿ ಶುಲ್ಕ ಹೆಚ್ಚಳಕ್ಕೆ ಮರುಪರಿಶೀಲಿಸುವಂತೆ ಸೂಚಿಸಿತು.
ಈ ಮೂಲಕ ಆರ್ಥಿಕವಾಗಿ ಶ್ರೀಮಂತ ವ್ಯಕ್ತಿಗಳು ಮಾತ್ರ ಎಸಿ ತರಗತಿಗಳಲ್ಲಿ ಪ್ರಯಾಣಿಸುತ್ತಾರೆಯೇ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ ಸಮಿತಿಯ ಪ್ರಕಾರ ಈ ಶಿಫಾರಸು ಅತ್ಯಂತ ಮಹತ್ವದ್ದಾಗಿದ್ದು ಸಮಿತಿಯ ಸಲಹೆಗಳನ್ನು ಆಧರಿಸಿ ಮೋದಿ ಸರ್ಕಾರ ಮುಂದಿನ ವರ್ಷ ಪ್ರಯಾಣ ದರ ಹೆಚ್ಚಳವನ್ನು ಜಾರಿಗೆ ತರುತ್ತದೆಯೇ ಎಂದು ಚರ್ಚಿಸಲಾಗ್ತಿದೆ.
ಕಳೆದ ಎರಡು ಹಣಕಾಸು ವರ್ಷಗಳಲ್ಲಿ ರೈಲ್ವೆಯ ಒಟ್ಟಾರೆ ಆದಾಯ ಚೇತರಿಕೆ ನಿರೀಕ್ಷೆಗಿಂತ ತೀರಾ ಕಡಿಮೆಯಾಗಿದೆ ಎಂದು ಸಮಿತಿಯ ವರದಿ ಎತ್ತಿ ತೋರಿಸಿದೆ. 2024-25 ಹಣಕಾಸು ವರ್ಷದಲ್ಲಿ, ರೈಲ್ವೆಯು ಸರಕು ಸಾಗಣೆಯಿಂದ 1.8 ಲಕ್ಷ ಕೋಟಿ ರೂ ಗಳಿಸಬಹುದು ಎಂದು ಅಂದಾಜಿಸಿದೆ. ಆದರೆ ಪ್ರಯಾಣಿಕರಿಂದ ಆದಾಯ ಕೇವಲ 80,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪ್ರಯಾಣಿಕರಿಗೆ ಹೆಚ್ಚಿನ ದರ ವಿಧಿಸುವುದು ರೈಲ್ವೆ ಇಲಾಖೆಯ ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಾಥಮಿಕ ಮಾರ್ಗಗಳಲ್ಲಿ ಒಂದಾಗಿದೆ ಎಂದು ಸಮಿತಿಯು ಲೆಕ್ಕಾಚಾರ ಹಾಕಿದೆ. ಈ ಹಿನ್ನೆಲೆಯಲ್ಲಿ ನಷ್ಟವನ್ನು ತಗ್ಗಿಸಲು ಎಸಿ ರೈಲುಗಳಲ್ಲಿ ದರ ಏರಿಕೆಯನ್ನು ಪರಿಗಣಿಸಲು ರೈಲ್ವೆಗೆ ಶಿಫಾರಸು ಮಾಡಲಾಗಿದೆ.