alex Certify ಜಮ್ಮು -ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ರೈನಾ; ಪಿತೂರಿ ಮಾಡಿದ ಪಾಕಿಸ್ತಾನ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮ್ಮು -ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ ರೈನಾ; ಪಿತೂರಿ ಮಾಡಿದ ಪಾಕಿಸ್ತಾನ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳ ಬಗ್ಗೆ ಮಾತನಾಡಿದ ಬಿಜೆಪಿ ನಾಯಕ ರವೀಂದರ್ ರೈನಾ ಶಾಂತಿ ಹಾಳು ಮಾಡಲು ಪಾಕಿಸ್ತಾನದ ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ, ಕಣಿವೆ ರಾಜ್ಯದಲ್ಲಿ ನಡೆದ ಉದ್ದೇಶಿತ ಹತ್ಯೆಗಳು ಭಯವನ್ನು ಸೃಷ್ಟಿಸಲು ನಡೆಸಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಕೇಂದ್ರದ ಪ್ರಯತ್ನಗಳನ್ನು ಹಾಳುಮಾಡಲು ಪಾಕಿಸ್ತಾನದ ಪಿತೂರಿ ನಡೆಸಿದೆ ಎಂದು ಹೇಳಿದ್ದಾರೆ.

ಜನರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರನ್ನು ‘ಆಲ್ ಔಟ್’ ಕಾರ್ಯಾಚರಣೆಯ ಅಡಿಯಲ್ಲಿ ತಟಸ್ಥಗೊಳಿಸುತ್ತಿದ್ದು, ನೆರೆಯ ದೇಶದ ಪಿತೂರಿ ವಿಫಲಗೊಳಿಸಲಾಗುವುದು ಎಂದು ರೈನಾ ಪ್ರತಿಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರಮುಖ ಅಭಿವೃದ್ಧಿ ಯೋಜನೆಗಳು ವೇಗ ಪಡೆಯುವುದರೊಂದಿಗೆ ಜಮ್ಮು ಮತ್ತು ಕಾಶ್ಮೀರ ಶಾಂತಿ ಮತ್ತು ಪ್ರಗತಿಯತ್ತ ಸಾಗುತ್ತಿದೆ. ಇದರಿಂದ ಹತಾಶೆಗೊಂಡ ಪಾಕಿಸ್ತಾನ ಮತ್ತು ಅದರ ಬೆಂಬಲಿತ ಭಯೋತ್ಪಾದಕರು ಜನರಲ್ಲಿ ಭಯವನ್ನು ಸೃಷ್ಟಿಸುವ ಮೂಲಕ ಸರ್ಕಾರದ ಪ್ರಯತ್ನಗಳನ್ನು ಹಾಳುಮಾಡಲು ಸಂಚು ರೂಪಿಸಿದ್ದಾರೆ ಎಂದರು.

ಉದ್ದೇಶಿತ ಹತ್ಯೆಗಳು ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್‌ಐ), ಅದರ ಸೇನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಮೂಲದ ಭಯೋತ್ಪಾದಕ ಗುಂಪುಗಳು ಜಂಟಿಯಾಗಿ ರೂಪಿಸಿದ ಪಿತೂರಿಯ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.

1980-1990ರಲ್ಲಿ ಆಗಿನ ಪಾಕಿಸ್ತಾನಿ ಮಿಲಿಟರಿ ಆಡಳಿತಗಾರ ಜನರಲ್ ಜಿಯಾ-ಉಲ್-ಹಕ್ ನೇತೃತ್ವದಲ್ಲಿ ಕಾಶ್ಮೀರಕ್ಕೆ ಸಾವು ಮತ್ತು ವಿನಾಶವನ್ನು ತಂದಿದ್ದ ‘ಆಪರೇಷನ್ ಟುಪಾಕ್’ ರೀತಿಯಲ್ಲಿ ಈಗ ‘ಆಪರೇಷನ್ ರೆಡ್ ವೇವ್’ ಎಂದು ಹೆಸರಿಸಿದ ಪಿತೂರಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಜನರ ದೊಡ್ಡ ಶತ್ರು ಪಾಕಿಸ್ತಾನವಾಗಿದೆ. ಕಣಿವೆ ರಾಜ್ಯದಲ್ಲಿ ಅಫ್ಘಾನಿಸ್ತಾನದಂತಹ ಪರಿಸ್ಥಿತಿ” ನಿರ್ಮಿಸಲು ಅದು ಬಯಸಿದೆ ಎಂದು ರೈನಾ ಆರೋಪಿಸಿದರು.

ರಾಷ್ಟ್ರೀಯವಾದಿಗಳಾದ ಜಮ್ಮು ಮತ್ತು ಕಾಶ್ಮೀರದ ಜನರ ಸಕ್ರಿಯ ಬೆಂಬಲದೊಂದಿಗೆ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಪೊಲೀಸರು ಮತ್ತು ಭದ್ರತಾ ಪಡೆಗಳು ಸಂಕಲ್ಪ ಮಾಡಿರುವುದರಿಂದ ‘ಆಪರೇಷನ್ ರೆಡ್ ವೇವ್’ ಕೂಡ ‘ಆಪರೇಷನ್ ಟುಪಾಕ್’ನಂತೆಯೇ ಆಗಲಿದೆ ಎಂದು ಅವರು ಹೇಳಿದರು.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರ ಇತ್ತೀಚಿನ ಹತ್ಯೆಯನ್ನು ಖಂಡಿಸಿದ ರೈನಾ, ಹೇಡಿ ಪಾಕಿಸ್ತಾನ ಮತ್ತು ಅದರ ಬೆಂಬಲಿತ ಭಯೋತ್ಪಾದಕರು ಮತ್ತೊಮ್ಮೆ ಘೋರ ಪಾಪವನ್ನು ಮಾಡಿದ್ದಾರೆ. ಇದಕ್ಕಾಗಿ ಅವರು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಕಳೆದ ಮೂರು ದಶಕಗಳಲ್ಲಿ ಅಮಾಯಕರನ್ನು ಹತ್ಯೆ ಮಾಡುವ ಮೂಲಕ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ತಲೆ ಎತ್ತಿದಾಗ(1989 ರಲ್ಲಿ) ರಾಷ್ಟ್ರೀಯವಾದಿ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರಲ್ಲಿ ಭಯ ಸೃಷ್ಟಿಸಲಾಯಿತು. ಅವರು ಸಹೋದರತ್ವಕ್ಕೆ ಹಾನಿ ಮಾಡಲು, ಶಾಂತಿ ಮತ್ತು ಅಭಿವೃದ್ಧಿ ಪ್ರಗತಿ ಹಾಳುಮಾಡಲು ಮತ್ತೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಗುಂಪುಗಳ ಎಲ್ಲಾ ಉನ್ನತ ಕಮಾಂಡರ್‌ ಗಳನ್ನು ಭದ್ರತಾ ಪಡೆಗಳು ನಿರ್ಮೂಲನೆ ಮಾಡಿದ ಕಾರಣ ಪಾಕಿಸ್ತಾನ ಮತ್ತು ಅದರ ಏಜೆನ್ಸಿಗಳು ಹತಾಶೆಗೊಂಡಿವೆ ಎಂದರು.

ಭದ್ರತಾ ಪಡೆಗಳು ಒಳನುಸುಳುವಿಕೆಯ ಎಲ್ಲಾ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸುವುದರೊಂದಿಗೆ ಭಯೋತ್ಪಾದನೆಯ ಬೆನ್ನೆಲುಬು ಈಗಾಗಲೇ ಮುರಿದುಹೋಗಿದೆ. ನಾವು ಈ ಪಿತೂರಿಯನ್ನು(ಉದ್ದೇಶಿತ ಹತ್ಯೆಗಳು) ಸಹ ವಿಫಲಗೊಳಿಸುತ್ತೇವೆ ಎಂದು ಅವರು ಹೇಳಿದರು.

ಪಾಕಿಸ್ತಾನ ತನ್ನ ಕರಾಳ ಕೃತ್ಯಗಳು ಮತ್ತು ಮಾನವೀಯತೆಯ ವಿರುದ್ಧ ಮಾಡಿದ ಅಪರಾಧಗಳಿಗೆ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...