ಚಿತ್ರದುರ್ಗ: ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಜನವರಿ 28 ರಿಂದ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದೆ.
ಸಿರಿಗೆರೆಯ ಶ್ರೀ ಗುರು ಶಾಂತೇಶ್ವರ ದಾಸೋಹ ಭವನದಲ್ಲಿ ಭಾನುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರಿನಲ್ಲಿ ಜನವರಿ 28 ರಿಂದ ಫೆಬ್ರವರಿ 5 ರವರೆಗೆ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದೆ ಎಂದರು.
ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜಕೀಯವನ್ನು ಬದಿಗಿರಿಸಿ ಧರ್ಮದ ತಳಹದಿಯ ಮೇಲೆ ತರಳಬಾಳು ಹುಣ್ಣಿಮೆ ಮಹೋತ್ಸವ ಯಶಸ್ವಿಗೊಳಿಸಬೇಕು. ರಾಜಕೀಯ ವ್ಯಕ್ತಿಗಳನ್ನು ಗೌರವಿಸೋಣ. ಆದರೆ ಯಾವುದೇ ಒಂದು ಪಕ್ಷದ ಮೇಲಾಟವಾಗಬಾರದು. ಭಾವೈಕ್ಯ ಪರಿಷತ್ತು ಎಂದೇ ಹೆಸರಾದ ತರಳಬಾಳು ಹುಣ್ಣಿಮೆಗೆ ತನ್ನದೇ ಆದ ಪರಂಪರೆ ಇದೆ. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಸರ್ವ ಜನಾಂಗದವರ ವೇದಿಕೆ ಇದಾಗಿದ್ದು, ತರಳಬಾಳು ಹುಣ್ಣಿಮೆಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.