ತಂಝಾನಿಯಾದ ರಾಷ್ಟ್ರೀಯ ಸಭೆಗೆ ಆಗಮಿಸಿದ್ದ ಮಹಿಳಾ ಸಂಸದೆಯೊಬ್ಬರನ್ನು ಅವರು ಧರಿಸಿದ ಬಟ್ಟೆ ಸರಿಯಾಗಿಲ್ಲವೆಂದು ಸಭೆಯಿಂದ ಹೊರಗೆ ಹೋಗಲು ಆದೇಶಿಸಿದ ಘಟನೆ ಮಹಿಳಾಪರರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕಾಂಡೆಸ್ಟರ್ ಸಿಚ್ವಾಲೇ ಹೆಸರಿನ ಈ ಮಹಿಳಾ ಸಂಸದೆ ತಾನು ಧರಿಸಿದ್ದ ಟೈಟ್-ಫಿಟ್ ಟ್ರೌಸರ್‌ಗಳ ಕಾರಣದಿಂದಾಗಿ ಸಂಸತ್ ಆವರಣದಿಂದ ಹೊರಗೆ ಬರಬೇಕಾಯಿತು. ಆಕೆಯ ಈ ಬಟ್ಟೆಯ ವಿಚಾರವನ್ನು ಸಂಸತ್ತಿನ ಪುರುಷ ಸದಸ್ಯ ಹುಸೇನ್ ಅಮರ್ ಎಂಬಾತ ಮುಂದೆ ತಂದು, ಕೆಲ ಮಹಿಳೆಯರು ಬಟ್ಟೆ ಧರಿಸುವ ರೀತಿ ಸರಿಯಾಗಿಲ್ಲವೆನ್ನುತ್ತಲೇ ಸಿಚ್ವಾನ್‌ರತ್ತ ಬೆರಳು ತೋರಿ, “ಮಿ. ಸ್ಪೀಕರ್, ಇದಕ್ಕೆ ಉದಾಹರಣೆ ನನ್ನ ಬಗಲಲ್ಲೇ ಹಳದಿ ಶರ್ಟ್ ಧರಿಸಿ ಕುಳಿತಿರುವ ನನ್ನ ಸಹೋದರಿ. ಆಕೆ ಧರಿಸಿರುವ ಟ್ರೌಸರ್‌ಗಳನ್ನು ನೋಡಿ, ಮಿ. ಸ್ಪೀಕರ್” ಎಂದು ಹೇಳಿದ್ದಾರೆ.
ಅಮರ್‌ರ ಕಾಮೆಂಟ್‌ಗಳನ್ನು ಆಲಿಸಿದ ಬಳಿಕ ಮಾತನಾಡಿದ ಸ್ಪೀಕರ್ ಜಾಬ್ ಡುಗಾಯ್, “ಹೋಗಿ ಚೆನ್ನಾಗಿ ಬಟ್ಟೆ ಹಾಕಿಕೊಳ್ಳಿ…..ನಂತರ ಬಂದು ನಮ್ಮನ್ನು ಕೂಡಿಕೊಳ್ಳಿ” ಎಂದು ಮಹಿಳಾ ಸಂಸದೆಗೆ ಆದೇಶಿಸಿದ್ದಾರೆ.
ಘಟನೆ ಸಂಬಂಧ ಅಮರ್ ಹಾಗೂ ಸ್ಪೀಕರ್ ಮಹಿಳಾ ಸಂಸದೆಯ ಕ್ಷಮೆಯಾಚಿಸಬೇಕೆಂದು ಸಂಸತ್ತಿನ ಇತರ ಮಹಿಳಾ ಸದಸ್ಯರು ಆಗ್ರಹಿಸಿದ್ದಾರೆ.