ತಿರುವನಂತಪುರ: ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮದಲ್ಲಿ ತಮ್ಮ ಮೂರೂವರೆ ವರ್ಷದ ಮಗನನ್ನು ಎತ್ತಿಕೊಂಡು ಭಾಷಣ ಮಾಡಿದ್ದು, ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ದಿವ್ಯಾ ಎಸ್. ಅಯ್ಯರ್ ಅವರು ಖಾಸಗಿ ಸಂಸ್ಥೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಗನನ್ನು ಎತ್ತಿಕೊಂಡು ಭಾಷಣ ಮಾಡಿದ್ದಾರೆ. ಇವರು ಚಲನಚಿತ್ರೋತ್ಸವದ ಸಮಾರೋಪ ಸಮಾರಂಭಕ್ಕೆ ಆಹ್ವಾನಿತರಾಗಿ ಹೋಗಿದ್ದರು.
ಅಡೂರಿನ 6ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟಕರಲ್ಲಿ ಒಬ್ಬರಾದ ರಾಜ್ಯ ವಿಧಾನಸಭೆಯ ಉಪಸಭಾಪತಿ ಚಿಟ್ಟಾಯಂ ಗೋಪಕುಮಾರ್ ಅವರು ದಿವ್ಯಾ ಅವರ ಭಾಷಣದ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ವಿವಾದದ ಸ್ವರೂಪ ಪಡೆದುಕೊಂಡಿದೆ.
ಉನ್ನತಾಧಿಕಾರಿಗಳು ತಮ್ಮ ಕಾರ್ಯನೀತಿಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಕೆಲ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ಧಾರೆ. ಆನಂತರ ಆ ವಿಡಿಯೋ ಇದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿದೆ.
ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಮಾತ್ರ ಚರ್ಚೆ ಇನ್ನೂ ನಡೆಯುತ್ತಲೇ ಇದೆ. ಹಲವು ನೆಟ್ಟಿಗರು ದಿವ್ಯಾ ಅವರ ಪರವಾಗಿ ಕಮೆಂಟ್ ಮಾಡಿದ್ದಾರೆ. ಅನೇಕ ಅಧಿಕಾರಿಗಳು, ರಾಜಕಾರಣಿಗಳು ಮಹತ್ವದ ಸಭೆಗೂ ಹಸುಗೂಸು ಮತ್ತು ಪುಟ್ಟಮಕ್ಕಳನ್ನು ಕರೆದೊಯ್ದುದನ್ನು ನೆನಪಿಸಿದ್ದಾರೆ.
ನ್ಯೂಝಿಲೆಂಡ್ನ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಕೂಡ ಇದಕ್ಕೆ ಹೊರತಾಗಿಲ್ಲ, 2018ರಲ್ಲಿ ಅವರು ವಿಶ್ವಸಂಸ್ಥೆಯ ಸಭೆಗೆ ತನ್ನ 3 ತಿಂಗಳ ಮಗುವನ್ನು ಕರೆದೊಯ್ದಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.