ಮಾಟಮಂತ್ರ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 45 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ರಾಮಗಢ ತಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ದಿನೇಶ್ ಚೌರಾಸಿಯಾ ಎಂದು ಗುರುತಿಸಲಾಗಿದೆ.
ಚೌರಾಸಿಯಾ ತನ್ನ ಮನೆಯ ಸಮಸ್ಯೆಗಳನ್ನು ಮತ್ತು ಅನಾರೋಗ್ಯವನ್ನು ಮಾಟಮಂತ್ರದ ಮೂಲಕ ಪರಿಹರಿಸುವುದಾಗಿ ಭರವಸೆ ನೀಡಿದ್ದ ಎಂದು 42 ವರ್ಷದ ಸಂತ್ರಸ್ತೆ ತಿಳಿಸಿದ್ದಾಳೆ. ಹತಾಶಳಾದ ಮಹಿಳೆ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಚೌರಾಸಿಯಾ ಭೇಟಿಯಾಗಿದ್ದಳು.
ಕಷ್ಟ ಪರಿಹರಿಸುವುದಾಗಿ ನಂಬಿಸಿದ್ದ ಆರೋಪಿ ಆಕೆ ಒಬ್ಬಳೇ ಇರುವಾಗ ಮನೆಗೆ ಹೋಗಿದ್ದಾನೆ. ಮಹಿಳೆಯ ಏಕಾಂತದ ಲಾಭ ಪಡೆದು ಕೃತ್ಯವೆಸಗಿದ್ದಾನೆ ಎಂದು ರಾಮಗಢ ತಾಲ್ ಎಸ್‌ಹೆಚ್‌ಒ ಚಿತ್ವಾನ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಮನೆಗೆ ಬಂದ ನಂತರ ಆಕೆಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ. ಆಕೆಯ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಮಹಿಳೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ,
ಪ್ರಜ್ಞೆ ಮರಳಿದ ನಂತರ ಅವಳು ತನ್ನ ಪತಿಗೆ ಘಟನೆ ಬಗ್ಗೆ ತಕ್ಷಣ ತಿಳಿಸಿದ್ದು, ನಂತರ ಆಕೆಯ ಪತಿ ಗುರುವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಚೌರಾಸಿಯಾ ಅವರನ್ನು ಶನಿವಾರ ಬಂಧಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಚೌರಾಸಿಯಾ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚಿನ ತನಿಖೆಯಿಂದ ಚೌರಾಸಿಯಾ ಈ ಹಿಂದೆಯೂ ಇದೇ ರೀತಿಯ ಘಟನೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ಆತನ ಹಿಂದಿನ ಚಟುವಟಿಕೆಗಳ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ.