ಉಡುಪಿ: ಬೋಟ್ ನಿಂದ ಬಿದ್ದು ಅರಬ್ಬಿ ಸಮುದ್ರ ಪಾಲಾಗಿದ್ದ ಮೀನುಗಾರನೊಬ್ಬ ಎರುಡು ದಿನಗಳ ಕಾಲ ಸಮುದ್ರದಲ್ಲಿಯೇ ಈಜಿ ಜೀವ ಉಳಿಸಿಕೊಂಡಿರುವ ಘಟನೆ ನಡೆದಿದೆ.
ಉಡುಪಿಯ ಬೈಂದೂರು ತಾಲೂಕಿನ ಗಂಗೊಳ್ಳಿ ಮೂಲದ ಸಾಗರ್ ಬೋಟ್ ನ ಮೀನುಗಾರರು 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜುತ್ತಲೇ ಇದ್ದ ಮುರುಗನ್ ಎಂಬ ಮೀನುಗಾರನನ್ನು ರಕ್ಷಣೆ ಮಾಡಿದ್ದಾರೆ.
ತಮಿಳುನಾಡು ಮೂಲದ 8 ಜನರ ತಂಡ ಆಳ ಸಮುದ್ರದಲ್ಲಿ ಮೀನುಗಾರಿಕೆಗೆಂದು ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು. 25 ವರ್ಷದ ಮುರುಗನ್ ಎಂಬಾತ ಶನಿವಾರ ರಾತ್ರಿ ಮೂತ್ರ ವಿಸರ್ಜನೆಗೆಂದು ಬೋಟ್ ಅಂಚಿಗೆ ಹೋಗಿದ್ದ. ಈ ವೇಳೆ ಬಿರುಗಾಳಿ ಬೀಸುತ್ತಿದ್ದಂತೆ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾನೆ.
ಎಷ್ಟು ಸಮಯವಾದರೂ ಮುರುಗನ್ ಬೋಟ್ ಒಳಗೆ ಬಾರದಿರುವುದನ್ನು ಗಮನಿಸಿದ ಇತರ ಮೀನುಗಾರರು ಆತ ಸಮುದ್ರದಲ್ಲಿ ಬಿದ್ದಿರಬಹುದು ಎಂದು ಅನುಮಾನಗೊಂಡು ಸಮುದ್ರದಲ್ಲಿ ಹುಡುಕಿದ್ದರು. ಆದರೆ ಎರಡು ದಿನಗಳಾದರೂ ಮುರುಗನ್ ಪತ್ತೆ ಇರಲಿಲ್ಲ. ಬಳಿಕ ಮುರುಗನ್ ಮೃತಪಟ್ಟಿದ್ದಾನೆ ಎಂದು ತಿಳಿದು ಮಾಲೀಕನಿಗೂ ವಿಷಯ ತಿಳಿಸಿದ್ದರು.
ಎರಡು ದಿನಗಳ ಬಳಿಕ ಗಂಗೊಳ್ಳಿಯ ಸಾಗರ್ ಬೋಟ್ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದಿದ್ದಾಗ ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲು ದೂರ ಹೋಗುತ್ತಿದ್ದಂತೆ ಸಮುದ್ರದಲ್ಲಿ ವ್ಯಕ್ತಿಯೊಬ್ಬ ಎರಡೂ ಕೈಗಳನ್ನು ಎತ್ತಿ ಒಮ್ಮೆ ಮೇಲೆ ಬಂದು ಮುಳುಗಿದ್ದಾನೆ. ಅಚ್ಚರಿಗೊಂಡ ಮೀನುಗಾರರು ಯಾರೋ ನೀರಿನಲ್ಲಿ ಮುಳುಗುತ್ತಿದ್ದಾರೆ ಎಂದು ಸಮುದ್ರದಲ್ಲಿ ಹುಡುಕಿದ್ದಾರೆ. ಈ ವೇಳೆ ಪ್ರಜ್ಞೆತಪ್ಪುವ ಸ್ಥಿತಿಯಲ್ಲಿದ್ದ ಮುರುಗನ್ ಸಿಕ್ಕಿದ್ದಾನೆ. ತಕ್ಷಣ ಆತನನ್ನು ರಕ್ಷಿಸಿದ್ದಾರೆ. 43 ಗಂಟೆಗಳಿಂದ ಸಮುದ್ರದ ಅಲೆಗಳ ನಡುವೆಯೇ ಈಜುತ್ತಲೇ ಇದ್ದ ಮುರುಗನ್ ತೀವ್ರವಾಗಿ ಬಳಲಿ ಹೋಗಿದ್ದು, ಬದುಕಿ ಬಂದಿರುವುದೇ ಅಚ್ಚರಿಯಾಗಿದೆ.