
ಚೆನ್ನೈ: ತಮಿಳುನಾಡಿನ ಕಲ್ಲುಕುರುಚಿಯಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, 34ಕ್ಕೆ ಏರಿಕೆಯಾಗಿದೆ. 60ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥರಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳ್ಳಭಟ್ಟಿ ದುರಂತದಲ್ಲಿ ಇಬ್ಬರು ಮಹಿಳೆಯರು ಸೇರಿ ಈವರೆಗೆ 34 ಜನರು ಮೃತಪಟ್ಟಿದ್ದಾರೆ. ಪ್ರಕರಣದ ಬೆನ್ನಲ್ಲೇ ಸಿಎಂ ಎಂ.ಕೆ.ಸ್ಟಾಲಿನ್ ನೇತೃತ್ವದ ರಾಜ್ಯ ಸರ್ಕಾರ ಎಸ್ ಪಿ ಸಮಯ ಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಕಲ್ಲುಕುರುಚಿ ನೂತನ ಎಸ್ ಪಿಯಾಗಿ ರಜತ್ ಚತುರ್ವೇದಿಯನ್ನು ನೇಮಿಸಲಾಗಿದೆ.
ಇದೇ ವೇಳೆ ಕಲ್ಲುಕುರುಚಿಗೆ ಜಿಲ್ಲಾಧಿಕಾರಿಯನ್ನು ಬದಲಿಸಿ, ಎಂ.ಎಸ್. ಪ್ರಶಾಂತ್ ಅವರನ್ನು ನೂತನ ಡಿಸಿಯಾಗಿ ನೇಮಕ ಮಾಡಲಾಗಿದೆ. ಪ್ರಕರಣ ಸಂಬಂಧ ಒಟ್ಟು ಒಂಭತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.