
ಚೆನ್ನೈ: ಅಕ್ರಮ ಮದ್ಯ ಸೇವಿಸಿ ಸಾವನ್ನಪ್ಪಿರುವವರ ಸಂಖ್ಯೆ 29ಕ್ಕೆ ಏರಿಕೆಯಾಗಿರುವ ಘಟನೆ ತಮಿಳುನಾಡಿನ ಕಲ್ಲಕುರುಚಿಯಲ್ಲಿ ನಡೆದಿದೆ.
ಕಳ್ಳಭಟ್ಟಿ ಸೇವಿಸಿ 29 ಜನರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಪ್ರಶಾಂತ್ ಆತಂಕ ವ್ಯಕ್ತಪಡಿಸಿದ್ದಾರೆ.
ಕಳ್ಳಭಟ್ಟಿ ದುರಂತ ಪ್ರಕರಣವನ್ನು ಸಿಬಿ-ಸಿಐಡಿ ತನಿಖೆಗೆ ವಹಿಸಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆದೇಶ ಹೊರಡಿಸಿದ್ದಾರೆ. ಕಳ್ಳಭಟ್ಟಿ ಮದ್ಯ ಸೇವಿಸಿ ದುರಂತ ಸಂಭವಿಸಿದ್ದು, ಆಘಾತ ತಂದಿದೆ. ಇಂತಹ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ಇಂತಹ ಸಮಾಜ ಹಾಳುಮಾಡುವ ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.