ರೌಡಿ ಬೇಬಿ ಹಾಡಿನಲ್ಲಿ ನಟ ಧನುಷ್ಗೆ ಸರಿಸಮನಾಗಿ ಡ್ಯಾನ್ಸ್ ಮಾಡಿ ಜನರ ಮನಗೆದ್ದ ನಟಿ ಸಾಯಿ ಪಲ್ಲವಿಗೆ ಆಗಾಗ್ಗೆ ದೈಹಿಕವಾಗಿ ಹೀಯಾಳಿಸುವ ಮಂದಿಯನ್ನು ಎದುರಿಸುವ ಸಂದರ್ಭಗಳು ಬರುತ್ತಿವೆ.
ಈ ಮುಂಚೆ ಆಕೆಯ ಮುಖದ ಕೆನ್ನೆಯ ಮೇಲೆ ಕೆಂಪು ಮೊಡವೆಗಳು ಸಿನಿಮಾದಲ್ಲಿ ಕಾಣಿಸುತ್ತವೆ. ಮೇಕಪ್ನಲ್ಲಿ ಅದನ್ನು ಮುಚ್ಚಲು ಆಕೆಯು ಬಿಡಲ್ಲ ಎಂಬ ಬಗ್ಗೆ ಭಾರಿ ಚರ್ಚೆಯಾಗಿತ್ತು. ಅದಕ್ಕೆ ಸಾಯಿ ಪಲ್ಲವಿ ಖಡಕ್ ಪ್ರತ್ಯುತ್ತರವನ್ನು ಟ್ರೋಲ್ಗಳಿಗೆ ಕೊಟ್ಟಿದ್ದರು.
ಈ ಬಾರಿ ಅವರ ಹೊಸ ಸಿನಿಮಾ ಶ್ಯಾಮ್ಸಿಂಗ್ ರಾಯ್ ಬಿಡುಗಡೆ ಆಗಿದೆ. ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ನಟ ನಾನಿ ಮತ್ತು ಸಾಯಿಪಲ್ಲವಿ ನಟನೆಯನ್ನು ಮೆಚ್ಚಿಕೊಂಡು ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ.
ಆದರೆ, ಇದರ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವವರು ನಟಿ ಸಾಯಿ ಪಲ್ಲವಿಯ ಬಾಡಿ ಶೇಮಿಂಗ್ ಮಾಡಲು ಶುರು ಮಾಡಿದ್ದಾರೆ. ಸಿನಿಮಾದಲ್ಲಿ ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಈ ಬಾರಿ ಸಾಯಿ ಪಲ್ಲವಿ ತಿರುಗೇಟು ಕೊಟ್ಟಿಲ್ಲ. ಬದಲಿಗೆ ಬಿಜೆಪಿಯ ಮಾಜಿ ನಾಯಕಿ ಹಾಗೂ ತೆಲಂಗಾಣದ ರಾಜ್ಯಪಾಲೆ ಡಾ. ತಮಿಳಿಸಾಯಿ ಸೌಂದರರಾಜನ್ ಅವರು ಪಲ್ಲವಿಯ ಬೆನ್ನಿಗೆ ನಿಂತಿದ್ದಾರೆ. ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ’’ ಈ ತರಹ ಒಂದು ಹೆಣ್ಣಿನ ದೇಹ ಹಾಗೂ ಅವಳು ಕಾಣುವ ರೀತಿಗಳನ್ನು ಹೀಯಾಳಿಸುವುದು ಬಹಳ ದೊಡ್ಡ ತಪ್ಪು. ಇದನ್ನು ಅನುಭವಿಸಿದವರಿಗೆ ಮಾತ್ರವೇ ಅದರ ನೋವು ಎಷ್ಟೆಂದು ಗೊತ್ತಿರುತ್ತದೆ. ಇಂತಹದ್ದನ್ನು ನಾನು ಕೂಡ ಎದುರಿಸಿ, ಕೆಲಸದಲ್ಲಿನ ನೈಪುಣ್ಯ ಹಾಗೂ ಶ್ರಮವಹಿಸಿ ಗೆದ್ದಿದ್ದೇನೆ. ನಾನು ಇಂದು ಉನ್ನತ ಸ್ಥಾನದಲ್ಲಿರಲು ಬಾಡಿ ಶೇಮಿಂಗ್ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ದೇಹದ ರಚನೆ, ಮುಖದ ಸೌಂದರ್ಯದ ಬಗ್ಗೆ ಟೀಕೆ ಮಾಡುವವರಿಗೆ ಮಹಿಳೆಯರು ಸೊಪ್ಪು ಹಾಕಬಾರದು. ಇದರಿಂದಾಗಿ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ದೇಹದ ಒಳಗಿನ ವ್ಯಕ್ತಿತ್ವ ಮುಖ್ಯ. ಅದರ ಬುದ್ಧಿಶಕ್ತಿ, ಕೌಶಲ್ಯ ಸಾಮಾಜಿಕವಾಗಿ ಬೆಲೆಬಾಳುವಂಥದ್ದು. ಟ್ರೋಲ್ಗಳನ್ನು ಕಡೆಗಣಿಸಬೇಕು ಎಂದು ಡಾ. ತಮಿಳಿಸಾಯಿ ಅವರು ಸಂದರ್ಶನವೊಂದರಲ್ಲಿ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಈ ವಿಡಿಯೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಕೂಡ.