ಸಾಮಾನ್ಯವಾಗಿ, ತಂದೆ ತನ್ನ ಮಗಳ ಮದುವೆಯಂದು ಆಕೆಗೆ ಆಭರಣಗಳು, ಬಟ್ಟೆಗಳು, ಪಾತ್ರೆಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಅಮೂಲ್ಯವಾದ ವರದಕ್ಷಿಣೆಯನ್ನು ನೀಡಿ ಸುದ್ದಿಯಾಗಿದ್ದಾರೆ.
ಹೌದು, ತಮಿಳುನಾಡಿನ ಪುದುಕ್ಕೊಟ್ಟೈನಲ್ಲಿ ತಮಿಳು ಕವಿ ಥೇಂಗಂ ಮೂರ್ತಿ, ತಮ್ಮ ಮಗಳ ಮದುವೆಗೆ ಪ್ರಸಿದ್ಧ ತಮಿಳು ಕವಿಗಳು ಮತ್ತು ಬರಹಗಾರರ ಕವನ ಮತ್ತು ಸಾಹಿತ್ಯ ಪುಸ್ತಕಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಸಾಂಪ್ರದಾಯಿಕ ಶೈಲಿಯಲ್ಲಿ ಅಲಂಕರಿಸಲಾದ ಒಂಭತ್ತು ಎತ್ತಿನ ಬಂಡಿಗಳಲ್ಲಿ ಈ ಅಮೂಲ್ಯ ಉಡುಗೊರೆಗಳು ಮದುವೆ ಸ್ಥಳಕ್ಕೆ ಬಂದಿವೆ.
ತಮಿಳು ಭಾಷೆ ಮತ್ತು ಸಾಹಿತ್ಯದಲ್ಲಿ ಶ್ರೇಷ್ಠತೆಗಾಗಿ ಮೀಸಲಾಗಿರುವ ತಮಿಳಿನಿ ಪುಲನಂ ಎಂಬ ವಾಟ್ಸಾಪ್ ಗುಂಪನ್ನು ಪ್ರಾರಂಭಿಸಿದವರು ಕವಿ ಮೂರ್ತಿ ಅವರು. ಇದನ್ನು ತಿಳಿದಿರುವವರಿಗೆ ವರದಕ್ಷಿಣೆಯಾಗಿ ಕವಿ ಮೂರ್ತಿ ಪುಸ್ತಕಗಳನ್ನು ನೀಡಿರುವುದು ಅಚ್ಚರಿ ತಂದಿಲ್ಲ. ಈ ಗುಂಪು ತನ್ನ ಸದಸ್ಯರಲ್ಲಿ ಹಲವಾರು ವೈದ್ಯರು, ಶಿಕ್ಷಕರು, ನಟರು ಮತ್ತು ಪೊಲೀಸ್ ಅಧಿಕಾರಿಗಳನ್ನು ಹೊಂದಿದೆ.
ಮದುವೆಯಲ್ಲಿ ಪಾಲ್ಗೊಂಡಿದ್ದ ಈ ತಂಡದ ಸದಸ್ಯರು ನವದಂಪತಿಗಳಿಗಾಗಿ ಅವ್ವೈಯಾರ್, ಕಂಬಾರ, ಭಾರತಿಯಾರ್, ಭಾರತಿದಾಸನ್, ಕಲ್ಯಾಣಸುಂದರಂ ಸೇರಿದಂತೆ ಖ್ಯಾತ ಕವಿಗಳ ಕವನ ಪುಸ್ತಕಗಳನ್ನು ತಂದಿದ್ದರು. ಅಲ್ಲದೆ, ಪುಸ್ತಕಗಳು, ಮಾವು, ಹಲಸು ಮತ್ತು ಬಾಳೆಹಣ್ಣುಗಳಂತಹ ಸಾಂಪ್ರದಾಯಿಕ ವಸ್ತುಗಳನ್ನು ಸಹ ಸಮಾರಂಭಕ್ಕೆ ತರಲಾಯಿತು ಹಾಗೂ ಸಾಂಪ್ರದಾಯಿಕ ತಮಿಳು ವಾದ್ಯಗಳಾದ ಉರುಮಿ ನುಡಿಸಲಾಯಿತು.
ಮೂರ್ತಿಯವರು ಈ ವಿಶಿಷ್ಟ ಪುಸ್ತಕಗಳ ವರದಕ್ಷಿಣೆಯನ್ನು ನೀಡುವ ಮೂಲಕ ತಮಿಳು ಭಾಷೆಯ ಹೋರಾಟವನ್ನು ಪ್ರತಿಪಾದಿಸಿದ್ದಾರೆ ಮತ್ತು ಈ ಸಾಮಾಜಿಕ ಆಚರಣೆಯ ವಿರುದ್ಧ ಬಲವಾದ ಸಂದೇಶವನ್ನು ರವಾನಿಸಿದ್ದಾರೆ.