ತಮಿಳುನಾಡಿನ ಗಾಯತ್ರಿ ರಘುರಾಮ್ ಬಿಜೆಪಿ ತೊರೆದಿದ್ದು, ಪಕ್ಷದ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಅಣ್ಣಾಮಲೈ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಟಿ, ನೃತ್ಯ ಸಂಯೋಜಕಿ ಮತ್ತು ರಿಯಾಲಿಟಿ ಶೋ ಸ್ಪರ್ಧಿ ಗಾಯತ್ರಿ ರಘುರಾಮ್ ಅವರು ಭಾರತೀಯ ಜನತಾ ಪಕ್ಷದ(ಬಿಜೆಪಿ) ಪದಾಧಿಕಾರಿಯೂ ಆಗಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅಡಿಯಲ್ಲಿ ಮಹಿಳೆಯರಿಗೆ ಸುರಕ್ಷತೆಯಿಲ್ಲದ ಕಾರಣ ಪಕ್ಷವನ್ನು ತೊರೆಯುವುದಾಗಿ ಮಂಗಳವಾರ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
ದೀರ್ಘಕಾಲದವರೆಗೆ ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಗಾಯತ್ರಿ ರಘುರಾಮ್, ಒಮ್ಮೆ ಪಕ್ಷದ ಕಲೆ ಮತ್ತು ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಕಳೆದ ನವೆಂಬರ್‌ನಲ್ಲಿ ಪಕ್ಷಕ್ಕೆ ಅಪಖ್ಯಾತಿ ತಂದಿದ್ದಕ್ಕಾಗಿ ಅವರನ್ನು ಆರು ತಿಂಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ವಿಚಾರಣೆ, ಸಮಾನ ಹಕ್ಕುಗಳು ಮತ್ತು ಮಹಿಳೆಯರಿಗೆ ಗೌರವಕ್ಕೆ ಅವಕಾಶ ನೀಡದ ಕಾರಣಕ್ಕಾಗಿ ನಾನು ತಮಿಳುನಾಡು ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆದುಕೊಂಡಿದ್ದೇನೆ. ಅಣ್ಣಾಮಲೈ ನೇತೃತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ನಾನು ಹೊರ ಹೋಗುವುದು ಉತ್ತಮ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಅಣ್ಣಾಮಲೈ ಸುಳ್ಳುಗಾರ, ಅಧಾರ್ಮಿಕ ನಾಯಕ ಎಂದು ಆರೋಪಿಸಿದ ಅವರು, ಅಣ್ಣಾಮಲೈ ನಾಯಕತ್ವದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮಹಿಳೆಯರು ಸುರಕ್ಷಿತವಾಗಿರಿ, ಯಾರಾದರೂ ನಿಮ್ಮನ್ನು ರಕ್ಷಿಸುತ್ತಾರೆ ಎಂದು ನಂಬಬೇಡಿ. ಯಾರೂ ಬರುವುದಿಲ್ಲ. ನಿಮ್ಮನ್ನು ಗೌರವಿಸದ ಸ್ಥಳದಲ್ಲಿ ಎಂದಿಗೂ ಉಳಿಯಬೇಡಿ ಎಂದು ಹೇಳಿದ್ದಾರೆ.
ಇದಲ್ಲದೆ, ಅಣ್ಣಾಮಲೈ ವಿರುದ್ಧ ಪೊಲೀಸ್ ದೂರು ದಾಖಲಿಸಲು, ಎಲ್ಲಾ ವಿಡಿಯೋಗಳು ಮತ್ತು ಆಡಿಯೊ ಕ್ಲಿಪ್‌ಗಳನ್ನು ಸಲ್ಲಿಸಲು ಸಿದ್ಧ ಎಂದು ಗಾಯತ್ರಿ ಹೇಳಿದ್ದಾರೆ.