ತಮಿಳುನಾಡಿನ ತಿರುಪತ್ತೂರಿನ ಅಂಬೂರಿನ 31 ವರ್ಷದ ಗೃಹಿಣಿ ಮುಬೀನಾ ಫಜ್ಲುರ್ರಹ್ಮಾನ್ ಆಘಾತಕ್ಕೊಳಗಾಗಿದ್ದಾರೆ. ಅವರ ಎಸ್ಬಿಐ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಮುಬೀನಾ, ಗ್ಯಾಸ್ ಸಬ್ಸಿಡಿ ಸೇರಿದಂತೆ ಸರ್ಕಾರದ ಯೋಜನೆಗಳಿಂದ ಹಣಕಾಸಿನ ನೆರವು ಪಡೆಯಲು ಈ ಬ್ಯಾಂಕ್ ಖಾತೆ ತೆರೆದಿದ್ದರು. ಆದ್ರೆ 4.46 ಕೋಟಿ ಜಿಎಸ್ಟಿ ಡಿಫಾಲ್ಟ್ ಇದೆ ಎನ್ನುವ ಕಾರಣಕ್ಕೆ ಅವರ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಇದ್ರಿಂದ ಮುಬೀನಾ ಕುಟುಂಬ ಸಂಕಷ್ಟದಲ್ಲಿದೆ.
ಎಂಆರ್ಕೆ ಎಂಟರ್ಪ್ರೈಸಸ್ ಎಂಬ ಹೆಸರಿನ ಕಂಪನಿ, ಮುಬೀನಾ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಬಳಸಿಕೊಂಡು ಮೋಸ ಮಾಡಿದೆ. ಇದ್ರಿಂದಾಗಿ ಮುಬೀನಾಗೆ ಯಾವುದೇ ಸರ್ಕಾರಿ ಹಣ ಸಿಗ್ತಿಲ್ಲ. ಕಲೈಂಜರ್ ಮಗಳಿರ್ ಉರಿಮೈ ತಿಟ್ಟಂ ಯೋಜನೆಯಡಿ ಅವರಿಗೆ ಸಾವಿರ ರೂಪಾಯಿ ಸಿಗ್ತಿತ್ತು. ಎರಡು ತಿಂಗಳಿಂದ ಆ ಹಣ ಸಿಗದೆ ಅವರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ.
ಮುಬೀನಾ ಪತಿ ಅಹ್ಮದ್, ಲೆದರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ 15 ಸಾವಿರ ರೂಪಾಯಿ ಸಂಬಳ ಬರುತ್ತದೆ. ಮೂವರು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ದಂಪತಿ ತಿರುಪತ್ತೂರು ಎಸ್ಪಿ ಕಚೇರಿ ಮತ್ತು ವೆಲ್ಲೂರಿನ ಜಿಎಸ್ಟಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.