ಚೆನ್ನೈ: ತಮಿಳುನಾಡಿನ ಕೋವಿಲ್‌ಪಟ್ಟಿಯ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವವನ್ನು ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪ್ರಕರಣದಲ್ಲಿ ಮೃತ ವ್ಯಕ್ತಿಯ ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಟುಟಿಕೋರಿನ್ ಜಿಲ್ಲೆಯ ನಿವಾಸಿಗಳು ಘಟನೆ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದಾರೆ.
ಪೊಲೀಸರಿಗೆ ಮಾಹಿತಿ ದೊರೆತ ಕೂಡಲೇ ತಂಡವೊಂದು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದೆ. ಮೃತರನ್ನು ಮೀನು ವ್ಯಾಪಾರಿ ಜ್ಞಾನಶೇಖರ್(42) ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ವ್ಯಕ್ತಿಯ ಮನೆಯವರು ವ್ಯತಿರಿಕ್ತ ಹೇಳಿಕೆ ನೀಡಿದ್ದರಿಂದ ಅನುಮಾನಗೊಂಡ ಪೊಲೀಸರು ಮೃತನ ಅಪ್ರಾಪ್ತ ಇಬ್ಬರು ಪುತ್ರಿಯರು ಮತ್ತು ಪತ್ನಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಕೊನೆಗೆ ಆ ವ್ಯಕ್ತಿಯನ್ನು ತನ್ನ ಕುಟುಂಬದವರೇ ಕೊಂದಿರುವುದು ಬೆಳಕಿಗೆ ಬಂದಿದೆ.
ತನಿಖೆ ವೇಳೆ ಪೊಲೀಸರು ವ್ಯಕ್ತಿಯ ನೆರೆಮನೆಯವರನ್ನು ವಿಚಾರಿಸಿದ್ದು, ಅಕ್ಟೋಬರ್ 15 ರಂದು ಜ್ಞಾನಶೇಖರ್ ಮತ್ತು ಆತನ ಪತ್ನಿ ನಡುವೆ ಜಗಳ ನಡೆದಿರುವುದು ತನಿಖಾ ತಂಡಕ್ಕೆ ತಿಳಿದು ಬಂದಿದೆ.
ನಿವಾಸಿಗಳ ಪ್ರಕಾರ, ಜ್ಞಾನಶೇಖರ್ ತನ್ನ ಹೆಂಡತಿಯ ನಡತೆ ಬಗ್ಗೆ ಶಂಕಿಸಿದ್ದ. ಆತನ ಹಿರಿಯ ಮಗಳು ಕಾರ್ತಿಕ್(24) ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವೂ ಇತ್ತು. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಜ್ಞಾನಶೇಖರ್ ಪತ್ನಿ ಹಾಗೂ ಮಗಳಿಗೆ ಬೈದಾಡಿದ್ದಾನೆ. ಜಗಳದ ನಂತರ ಪತ್ನಿ, ಮಗಳು ಆತನ್ನು ಹೊಡೆದು ಕೊಂದಿದ್ದಾರೆ.
ನಂತರ, ತಾಯಿ-ಮಗಳು ಕಾರ್ತಿಕ್ ಸಹಾಯದಿಂದ ಜ್ಞಾನಶೇಖರ್ ಶವವನ್ನು ಗೋಣಿಚೀಲದಲ್ಲಿ ತುಂಬಿ, ದೇಹವನ್ನು ಸುಟ್ಟು ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡಿದ್ದಾರೆ. ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.