ಕೊಯಮತ್ತೂರು: ತಮಿಳುನಾಡಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 3.5 ಕೋಟಿ ರೂಪಾಯಿ ವಿಮೆ ಹಣ ಪಡೆಯಲು ಮಹಿಳೆಯೊಬ್ಬಳು ತನ್ನ ಗಂಡನನ್ನು ಜೀವಂತವಾಗಿ ಸುಟ್ಟು ಹಾಕಿದ್ದಾಳೆ.
ಕೊಯಮತ್ತೂರು ಸಮೀಪದ ಪೇರಿಮನಲ್ಲೂರು ಪೊಲೀಸರು ಶುಕ್ರವಾರ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. 57 ವರ್ಷದ ಮಹಿಳೆ ತನ್ನ 62 ವರ್ಷದ ಗಂಡನನ್ನು ಕೊಲೆ ಮಾಡಲು ಸಂಬಂಧಿಕನೊಬ್ಬನ ನೆರವು ಪಡೆದಿದ್ದಾಳೆ. ಇಬ್ಬರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.
ಈರೋಡ್ ಜಿಲ್ಲೆಯ ತುಡುಪತಿ ನಿವಾಸಿ ಕೆ. ರಂಗರಾಜ್ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ವಿದ್ಯುತ್ ಮಗ್ಗದ ಘಟಕವನ್ನು ಹೊಂದಿದ್ದ ರಂಗರಾಜ್ ಮಾರ್ಚ್ 15 ರಂದು ಅಪಘಾತದಲ್ಲಿ ಗಾಯಗೊಂಡಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಗುರುವಾರ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದ್ದು, ಅವರ ಪತ್ನಿ ಜ್ಯೋತಿಮಣಿ ಮತ್ತು ಸಂಬಂಧಿಕ ರಾಜ ವ್ಯಾನ್ ನಲ್ಲಿ ಕರೆದುಕೊಂಡು ತುಡುಪತಿಗೆ ಪ್ರಯಾಣ ಆರಂಭಿಸಿದ್ದಾರೆ.
ರಾತ್ರಿ 11.30 ರ ಸುಮಾರಿಗೆ ಪೆರುಮನಲ್ಲೂರ್ ಬಳಿಯ ವಲಸುಪಾಲಯಂಗೆ ತಲುಪಿದಾಗ ರಾಜ ಮತ್ತು ಜ್ಯೋತಿಮಣಿ ವಾಹನದಿಂದ ಇಳಿದು ಬೆಂಕಿಹಚ್ಚಿ ಸುಟ್ಟು ಹಾಕಿದ್ದಾರೆ. ವಾಹನ ಸಮೇತ ರಂಗರಾಜ್ ಅವರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ.
ತಿರುಪುರ್ ಗ್ರಾಮೀಣ ಪೊಲೀಸರಿಗೆ ಅಪಘಾತದಿಂದ ಬೆಂಕಿ ತಗುಲಿ ರಂಗರಾಜ್ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಅನುಮಾನಾಸ್ಪದ ವರ್ತನೆ ತೋರಿದ ರಾಜನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತ ಕ್ಯಾನ್ ನಲ್ಲಿ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ಖರೀದಿಸಿರುವುದು ಗೊತ್ತಾಗಿದೆ. ಪೆಟ್ರೋಲ್ ಬಂಕ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸಿದಾಗ ರಂಗರಾಜ್ ಅವರನ್ನು ಜೀವಂತವಾಗಿ ಸುಟ್ಟು ಹಾಕಿರುವುದನ್ನು ತಿಳಿಸಿದ್ದಾರೆ.
ಜೋತಿಮಣಿ ಹಣಕ್ಕಾಗಿ ರಂಗರಾಜ್ ಹೆಸರಲ್ಲಿ 3.5 ಕೋಟಿ ರೂಪಾಯಿಯ ಮೂರು ವಿಮೆ ಪಾಲಿಸಿ ಮಾಡಿಸಿದ್ದು, ಆಕೆಯೇ ನಾಮಿನಿಯಾಗಿದ್ದಳು. ವಿಮೆ ಹಣ ಪಡೆಯುವ ಉದ್ದೇಶದಿಂದ ಅಪಘಾತದಲ್ಲಿ ಗಂಡ ಮೃತಪಟ್ಟ ರೀತಿ ಬಿಂಬಿಸಿದ್ದು, ಸಂಬಂಧಿ ರಾಜನೊಂದಿಗೆ ಸೇರಿ ಬೆಂಕಿಹಚ್ಚಿ ಕೊಲೆ ಮಾಡಿದ್ದಾಳೆ. ಇದಕ್ಕಾಗಿ ಸಂಬಂಧಿ ರಾಜನಿಗೆ 50 ಸಾವಿರ ರೂ. ಕೊಟ್ಟಿದ್ದು ನಂತರ 1 ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದಳು. ಕೊಲೆ ರಹಸ್ಯ ಬಯಲಿಗೆಳೆದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.