ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಈ ತನಿಖಾ ಸಂಸ್ಥೆಗಳ ಪೈಕಿ ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಪ್ರಮುಖವಾಗಿವೆ.
ಕೇಂದ್ರ ಸರ್ಕಾರ, ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ಕಾರಣಕ್ಕಾಗಿಯೇ ಈಗಾಗಲೇ ಒಂಬತ್ತು ರಾಜ್ಯ ಸರ್ಕಾರಗಳು ಸಿಬಿಐಗೆ ನೀಡಲಾಗಿದ್ದ ‘ಸಾಮಾನ್ಯ ಸಮ್ಮತಿ’ ಆದೇಶವನ್ನು ಹಿಂಪಡೆದುಕೊಂಡಿವೆ. ಇದೀಗ ಈ ರಾಜ್ಯಗಳ ಪಟ್ಟಿಗೆ ತಮಿಳುನಾಡು ಸಹ ಸೇರ್ಪಡೆಯಾಗಿದೆ.
ಪಶ್ಚಿಮ ಬಂಗಾಳ, ಚತ್ತೀಸ್ಗಡ, ಕೇರಳ, ಜಾರ್ಖಂಡ್, ಮೇಘಾಲಯ, ಮಿಜೋರಾಂ, ಪಂಜಾಬ್, ರಾಜಸ್ಥಾನ ಹಾಗೂ ತೆಲಂಗಾಣ ಸರ್ಕಾರಗಳು ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದುಕೊಂಡಿದ್ದು, ಇದೀಗ ಸ್ಟಾಲಿನ್ ನೇತೃತ್ವದ ತಮಿಳುನಾಡು ಸಹ ಇಂಥವುದೇ ತೀರ್ಮಾನ ಕೈಗೊಂಡಿದೆ.
ಹೀಗಾಗಿ ಈ ರಾಜ್ಯಗಳಲ್ಲಿ ಸಿಬಿಐ, ಏಕಾಏಕಿ ಧಾವಿಸಿ ವಿಚಾರಣೆ ಕೈಗೊಳ್ಳುವಂತಿಲ್ಲ. ಸಿಬಿಐ ತನಿಖೆಗೆ ಪ್ರವೇಶ ನಿಷೇಧಿಸಿರುವುದು ಬಿಜೆಪಿಯೇತರ ರಾಜ್ಯ ಸರ್ಕಾರಗಳು ಎಂಬುದು ಗಮನಾರ್ಹ. ಇದೀಗ ಇತ್ತೀಚೆಗೆ ಆಡಳಿತಕ್ಕೆ ಬಂದಿರುವ ಕರ್ನಾಟಕ ರಾಜ್ಯ ಸರ್ಕಾರವು ಕೂಡ ಇಂತಹುದೇ ತೀರ್ಮಾನ ಕೈಗೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.