
ಚೆನ್ನೈ: ಕೋವಿಡ್ ಐಸೋಲೇಶನ್ ಹೋಟೆಲ್‌ನಲ್ಲಿ ಇಬ್ಬರು ಮಹಿಳಾ ವೈದ್ಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ಇಬ್ಬರು ಮಹಿಳಾ ವೈದ್ಯರು ಕೋವಿಡ್ ಕರ್ತವ್ಯದಲ್ಲಿದ್ದ ಸ್ಟಾರ್ ಹೋಟೆಲ್‌ನಲ್ಲಿ ಆಗಸ್ಟ್ 5 ಮತ್ತು ಸೆಪ್ಟೆಂಬರ್ 6 ರಂದು ಘಟನೆಗಳು ನಡೆದಿವೆ. ಇಬ್ಬರು ಸಂತ್ರಸ್ತರು ಘಟನೆಯ ಕುರಿತು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆ ಡೀನ್‌ಗೆ ದೂರು ನೀಡಿದ್ದಾರೆ. ಅದರ ನಂತರ, ಪ್ರಕರಣದ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ವರದಿಯನ್ನು ಚೆನ್ನೈ ನಗರ ಪೊಲೀಸರಿಗೆ ಬುಧವಾರ ಸಲ್ಲಿಸಲಾಗಿದ್ದು, ಇಬ್ಬರೂ ಆರೋಪಿ ವೈದ್ಯರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಮನವಿ ಮಾಡಲಾಗಿದೆ.
ಮೊದಲ ಘಟನೆ
ಆರ್ಥೋಪೆಡಿಕ್ ಸರ್ಜನ್ ಎಸ್. ವೆಟ್ರಿಸೆಲ್ವನ್ ಅವರ ಎದುರಿನ ಕೊಠಡಿಯಲ್ಲಿ ನಾನು ಉಳಿದುಕೊಂಡಿದ್ದೆ. ಫೋನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ, ನನ್ನ ಕುಟುಂಬಕ್ಕೆ ಕರೆ ಮಾಡಲು ಸಾಧ್ಯವಾಗಲಿಲ್ಲ. ಫೋನ್ ಸಮಸ್ಯೆಯನ್ನು ಪರಿಹರಿಸಲು ಸಹೋದ್ಯೋಗಿಗೆ ವಿನಂತಿಸಿದೆ. ಇದಕ್ಕಾಗಿ ವೆಟ್ರಿಸೆಲ್ವನ್ ಅವರ ಕೋಣೆಗೆ ಪ್ರವೇಶಿಸಿದಾಗ, ಅವನು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳಾ ವೈದ್ಯೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಎರಡನೇ ಘಟನೆ
ಇನ್ನೊಂದು ಘಟನೆಯಲ್ಲಿ ಮಹಿಳಾ ವೈದ್ಯೆಯೊಬ್ಬರು ಅಣ್ಣಾ ಸಲೈನಲ್ಲಿರುವ ಹೋಟೆಲ್‌ನ ಎರಡನೇ ಮಹಡಿಯಲ್ಲಿ ತಂಗಿದ್ದರು. ಆರೋಪಿ ವೈದ್ಯ(ಎನ್. ಮೋಹನರಾಜ್) ದೂರುದಾರರನ್ನು ತನ್ನ ಕೋಣೆಗೆ ಆಹ್ವಾನಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಏತನ್ಮಧ್ಯೆ, ಇಂತಹ ಘೋರ ಅಪರಾಧಗಳ ಬಗ್ಗೆ ಮಾಹಿತಿ ಪಡೆದ ನಂತರ, RGGH ವೈದ್ಯರು ಸರ್ಕಾರಿ ಆಸ್ಪತ್ರೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ರಾಜೀವ್ ಗಾಂಧಿ ಆಸ್ಪತ್ರೆಯ ಡೀನ್ ಅವರು ಆಂತರಿಕ ವಿಚಾರಣೆ ನಡೆಸಲು ವೈದ್ಯರ ತಂಡವನ್ನು ನಿಯೋಜಿಸಿದ್ದರು.
ಎರಡೂ ಘಟನೆಗಳ ಬಗ್ಗೆ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆ ಡೀನ್ ಥೆರನಿರಾಜನ್ ಅವರು ನವೆಂಬರ್ 16 ರಂದು ದೂರು ಸ್ವೀಕರಿಸಿದ್ದಾರೆ. ಆಂತರಿಕ ತನಿಖೆಯ ಕುರಿತು ಪ್ರತಿಕ್ರಿಯಿಸಿದ ಅವರು, ಅತ್ಯಾಚಾರ ಸೇರಿದಂತೆ ಲೈಂಗಿಕ ಕಿರುಕುಳದ ಪ್ರಾಥಮಿಕ ಸಾಕ್ಷ್ಯವಿದೆ ಎಂದು ಸಮಿತಿಯ ಸದಸ್ಯರು ವಿಚಾರಣೆಯ ಸಂದರ್ಭದಲ್ಲಿ ತೀರ್ಮಾನಿಸಿ ತಕ್ಷಣ ಪೊಲೀಸ್ ದೂರು ದಾಖಲಿಸಲು ವರದಿಯನ್ನು ನಮಗೆ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.