12ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ನೀಡಿದ ಆರೋಪ ಎದುರಿಸುತ್ತಿದ್ದ 31 ವರ್ಷದ ಭೌತಶಾಸ್ತ್ರ ಉಪನ್ಯಾಸಕನನ್ನು ಕೊಯಂಬತ್ತೂರಿನಲ್ಲಿ ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬಾಲಕಿ ದೂರು ನೀಡಿದ್ದರೂ ಸಹ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನೂ ಪೊಲೀಸರು ಬಂಧಿಸಿದ್ದಾರೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುವ ಲಾಭ ರಹಿತ ಸಂಸ್ಥೆ ತುಳಿರ್ ಸಂಸ್ಥಾಪಕಿ ವಿದ್ಯಾ ರೆಡ್ಡಿ ಈ ವಿಚಾರವಾಗಿ ಮಾತನಾಡಿದ್ದು, ಈ ಪ್ರಕರಣವು ಪ್ರತಿಯೊಂದು ಶಾಲೆಗೂ ಒಂದು ಪಾಠವಾಗಬೇಕು. ಈ ಪ್ರಕರಣವು ಶಾಲೆಯು ಹೇಗಿದೆ ಎಂದು ತೋರಿಸುತ್ತಿಲ್ಲ. ಆದರೆ ಶಾಲೆಯಲ್ಲಿರುವ ಕೆಲ ಜನರ ಮನಃಸ್ಥಿತಿ ಹೇಗಿತ್ತು ಎಂದು ತೋರಿಸಿದೆ ಅಂತಾ ಹೇಳಿದ್ರು.
ಪ್ರಕರಣದ ಕುರಿತು ಮಾತನಾಡಿದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಕೆಲವರ ವಿಕೃತ ಮನಸ್ಸಿನಿಂದಾಗಿ ವಿದ್ಯಾರ್ಥಿನಿ ತನ್ನ ಜೀವ ಕಳೆದುಕೊಂಡಿದ್ದಾಳೆ. ಶಾಲೆಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕು. ಅಪರಾಧಿಗಳನ್ನು ಕಾನೂನಿನ ಮುಂದೆ ಹಾಜರುಪಡಿಸುತ್ತೇವೆ. ಮಹಿಳೆಯರ ಸುರಕ್ಷತೆಗೆ ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಇತ್ತೀಚೆಗಷ್ಟೇ, ಪ್ರಸ್ತುತ ಹಾಗೂ ಹಿಂದೆ ನಡೆದ ಲೈಂಗಿಕ ಕಿರುಕುಳ ಆರೋಪಗಳ ಅಡಿಯಲ್ಲಿ ಚೆನ್ನೈನ ಪ್ರಮುಖ ಶಾಲೆಗಳ ಕೆಲ ಶಿಕ್ಷಕರನ್ನು ಬಂಧಿಸಲಾಗಿತ್ತು. ಈ ಪ್ರಕರಣಗಳಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ವಿದ್ಯಾರ್ಥಿಗಳು ವರದಿ ಮಾಡಿದ್ದರೂ ಸಹ ಶಾಲೆಯ ಶಿಕ್ಷಕರು ಅದನ್ನು ಮುಚ್ಚಿಡಲು ಮುಂದಾಗಿದ್ದರು.