ತಮಿಳುನಾಡಿನ ತಿರುಪ್ಪೂರ್ ನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಬಸ್ ಓಡಿಸುತ್ತಿರುವಾಗ್ಲೇ ಶಾಲಾ ಬಸ್ ಚಾಲಕನಿಗೆ ಹೃದಯಾಘಾತವಾಗಿದೆ. ತನ್ನ ಪ್ರಾಣವನ್ನು ಲೆಕ್ಕಿಸದೆ ಆತ ವಾಹನವನ್ನು ಒಂದು ಕಡೆ ಸುರಕ್ಷಿತವಾಗಿ ನಿಲ್ಲಿಸಿದ್ದಾನೆ. ನಂತ್ರ ಸೀಟ್ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ.
ತಿರುಪುರ್ ಜಿಲ್ಲೆಯ ಗಂಗೇಯಂ ನಿವಾಸಿ ಮಲಯಪ್ಪನ್ ಅವರಿಗೆ ಖಾಸಗಿ ಶಾಲಾ ಬಸ್ ಓಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಈ ನೋವಿನ ಮಧ್ಯೆಯೂ ಅವರು ರಸ್ತೆಯ ಬದಿಗೆ ವಾಹನವನ್ನು ನಿಲ್ಲಿಸಿದ್ದಾರೆ. ಈ ಸಮಯದಲ್ಲಿ ನೋವು ತೀವ್ರವಾದ ಕಾರಣ ಅವರು ಕುಳಿತಲ್ಲೇ ಕುಸಿದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದ್ರೂ ಪ್ರಯೋಜನವಾಗಲಿಲ್ಲ.
ನೋವಿನ ಮಧ್ಯೆಯೂ ನಿಸ್ವಾರ್ಥ ಸೇವೆ ಮಾಡಿದ ಮಲಯಪ್ಪನ ಕಾರ್ಯವನ್ನು ಶ್ಲಾಘಿಸಲಾಗಿದೆ. ಮಲಯಪ್ಪ, ವೆಲ್ಲಕೋಯಿಲ್‌ನ ಎಎನ್‌ವಿ ಮೆಟ್ರಿಕ್ ಶಾಲೆಯ ಚಾಲಕರಾಗಿದ್ದರು. ಗುರುವಾರ ಸಂಜೆ ವೆಳ್ಳಕೋಯಿಲ್-ಕರೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮಲಯಪ್ಪರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಸಾವಿನಂಚಿನಲ್ಲೂ ಅವರು ಮಕ್ಕಳನ್ನು ರಕ್ಷಿಸಿದ್ದು, ಅವರ ಕಾರ್ಯದಿಂದಲೇ ಅವರು ಜೀವಂತವಾಗಿರ್ತಾರೆ ಎಂದು ಸಿಎಂ ಹೇಳಿದ್ದಾರೆ. ಮಕ್ಕಳನ್ನು ರಕ್ಷಿಸಿದ ಮಲಯಪ್ಪನ ಕೆಲಸಕ್ಕೆ ಪಾಲಕರು ಕಂಬನಿಮಿಡಿದಿದ್ದಾರೆ.