
ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಚೆರಣಮ್ಮ ನಗರದ ಬಳಿ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆಕೆಯ 33 ವರ್ಷದ ಸಂಬಂಧಿಯನ್ನು ಬಂಧಿಸಲಾಗಿದೆ.
ಆರೋಪಿ ಹಲವು ಬಾರಿ ಕಿರುಕುಳ ನೀಡಿದ್ದು, ಬಾಲಕಿ ಪೋಷಕರ ದೂರಿನ ನಂತರ, ವಡಮದುರೆಯ ಆರ್. ಮೂರ್ತಿ ಎಂದು ಗುರುತಿಸಲಾದ ಆರೋಪಿಯನ್ನು ಕೊಯಮತ್ತೂರು ಪೂರ್ವ ಮಹಿಳಾ ಪೊಲೀಸರು ಬಂಧಿಸಿದ್ದಾರೆ.
ಎರಡು ತಿಂಗಳ ಹಿಂದೆ 10 ನೇ ತರಗತಿ ವಿದ್ಯಾರ್ಥಿನಿ ತನ್ನ ಮೊಬೈಲ್ ಫೋನಿನಲ್ಲಿ ಕೆಲವು ವಿಡಿಯೋ ತುಣುಕುಗಳನ್ನು ನೋಡುತ್ತಿರುವುದನ್ನು ಆರೋಪಿ ನೋಡಿದ್ದಾನೆ. ಆಕೆಯ ಪೋಷಕರಿಗೆ ವಿಷಯ ತಿಳಿಸುವುದಾಗಿ ಬೆದರಿಸಿ ಕಿರುಕುಳ ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿರುವುದಾಗಿ ಆಕೆಯ ಪೋಷಕರಿಗೆ ತಿಳಿಸುವುದಾಗಿ ಬೆದರಿಕೆ ಹಾಕುವ ಮೂಲಕ ಆತ ಅವಳಿಗೆ ಕಿರುಕುಳ ನೀಡಿದ್ದಾನೆ. ಈ ಘಟನೆಯನ್ನು ಯಾರಿಗೂ ಬಹಿರಂಗಪಡಿಸದಂತೆ ಆತ ಆಕೆಗೆ ಬೆದರಿಸಿದ್ದ.
ಎರಡು ದಿನಗಳ ಹಿಂದೆ ಆರೋಪಿ ಬಾಲಕಿಯ ಮನೆಗೆ ಭೇಟಿ ನೀಡಿದ್ದ. ಸಹೋದರನನ್ನು ಕ್ರಿಕೆಟ್ ಬಾಲ್ ಖರೀದಿಸಲು ಕಳುಹಿಸಿ, ನಂತರ ಹುಡುಗಿಗೆ ಮತ್ತೆ ಕಿರುಕುಳ ನೀಡಿದದ್ದಾನೆ. ಕೊನೆಗೆ ಧೈರ್ಯ ತಂದುಕೊಂಡ ಬಾಲಕಿ ಪೋಷಕರಿಗೆ ತನ್ನ ಸಂಕಟವನ್ನು ವಿವರಿಸಿದ್ದಾಳೆ.
ಹುಡುಗಿಯ ಪೋಷಕರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ, ಮಹಿಳಾ ಪೋಲಿಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 9 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಬಂಧಿಸಿದ್ದಾರೆ. ಆತನನ್ನು ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಯಿತು.