ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಭಾರಿ ಮಳೆ ಅವಾಂತರ ಸೃಷ್ಟಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಎಂ ಸ್ಟಾಲಿನ್ ಅವರಿಗೆ ಕರೆಮಾಡಿ ಮಳೆ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ತಮಿಳುನಾಡು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯಿಂದ ಭಾರಿ ಹಾನಿಯಾಗಿರುವ ಬಗ್ಗೆ ಸ್ಟಾಲಿನ್ ಅವರಿಂದ ಮಾಹಿತಿ ಪಡೆದುಕೊಂಡ ಮೋದಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಮಹಾಮಳೆಗೆ ಚೆನ್ನೈ ಮಹಾನಗರ ತತ್ತರಿಸಿಹೋಗಿದೆ. ಕಳೆದ 12 ಗಂಟೆಯ ಅವಧಿಯಲ್ಲಿ ಚೆನ್ನೈನಲ್ಲಿ ಭಾರಿ ಮಳೆಯಾದ ಪರಿಣಾಮ ಜನಜೀವನ ಬಹುತೇಕ ಅಸ್ತವ್ಯಸ್ತಗೊಂಡಿದೆ. ಚೆನ್ನೈ ಮಹಾನಗರದ ರಸ್ತೆಗಳು ಕೆರೆಗಳಂತಾಗಿವೆ. ವಾಹನ ಸವಾರರು, ನಿವಾಸಿಗಳು ಪರದಾಟ ನಡೆಸಿದ್ದಾರೆ. ಡ್ಯಾಂಗಳು ಭರ್ತಿಯಾಗಿದ್ದು, ಜಲಾಶಯಗಳಿಂದ ನೀರನ್ನು ಹೊರಬಿಡಲಾಗಿದೆ.
ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈ, ತಿರುವಳ್ಳೂರು, ಕಾಂಚಿಪುರಂ, ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಮಹಾಮಳೆಗೆ ಚೆನ್ನೈ ಮಹಾನಗರ ಸ್ತಬ್ಧವಾಗಿದ್ದು, ಏರ್ಪೋರ್ಟ್ ರನ್ ವೇ ಬಂದ್ ಮಾಡಿ, ಲೋಕಲ್ ಟ್ರೈನ್ ಗಳನ್ನು ನಿಲ್ಲಿಸಲಾಗಿದೆ.